ಪಾಕ್ ಅಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ಮಾಡಿದ್ದ ಭಾರತೀಯ ಯೋಧರು, ಅವರ ನೆಲೆಗಳನ್ನು ಧ್ವಂಸ ಮಾಡಿದ್ದಲ್ಲದೇ 40 ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಪಾಕ್ ಹೊರತುಪಡಿಸಿ ಹಲವು ಪ್ರಮುಖ ರಾಷ್ಟ್ರಗಳು ಸಮರ್ಥಿಸಿಕೊಂಡಿವೆ. ಈ ಮಧ್ಯೆ ಪಾಕಿಸ್ತಾನದ ಖ್ಯಾತ ಗಾಯಕರೊಬ್ಬರು ಭಾರತೀಯ ಸೇನೆಯ ಕಾರ್ಯಾಚರಣೆಗೆ ಅಭಿನಂದಿಸುವ ಮೂಲಕ ಪಾಕಿಸ್ತಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು. ಪಾಕಿಸ್ತಾನದ ಖ್ಯಾತ ಗಾಯಕ ಅದ್ನಾನ್ ಸಾಮಿ, ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರಲ್ಲದೇ ಉಗ್ರರ ವಿರುದ್ದ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಅದ್ನಾನ್ ಸಾಮಿಯವರ ಟ್ವೀಟ್ ಅನ್ನು ಖಂಡಿಸಿ ಪಾಕಿಸ್ತಾನೀಯರು ಟ್ವೀಟ್ ಮಾಡಿದ್ದು,ಇದಕ್ಕೆ ಅದ್ನಾನ್ ಸಾಮಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಉಗ್ರರು ಹಾಗೂ ಪಾಕಿಸ್ತಾನಿಗಳು ಬೇರೆ ಬೇರೆ. ಭಾರತೀಯ ಪಡೆಗಳು ಉಗ್ರರ ವಿರುದ್ದ ನಡೆಸಿದ ದಾಳಿಯನ್ನು ಪಾಕಿಸ್ತಾನದ ಜೊತೆ ಸಮೀಕರಿಸಬಾರದೆಂದು ಅದ್ನಾನ್ ಸಾಮಿ ಹೇಳಿದ್ದಾರೆ. ಹಲವು ವರ್ಷಗಳಿಂದಲೂ ಭಾರತದಲ್ಲೇ ನೆಲೆಸಿರುವ ಅದ್ನಾನ್ ಸಾಮಿಯವರ ಪಾಸ್ ಪೋರ್ಟ್ ಅನ್ನು ನವೀಕರಿಸಲು ಮೇ 2015 ರಲ್ಲಿ ಪಾಕಿಸ್ತಾನ ನಿರಾಕರಿಸಿದ ವೇಳೆ ಮಾನವೀಯತೆ ಆಧಾರದ ಮೇಲೆ ಅವರು ಭಾರತದಲ್ಲೇ ನೆಲೆಸಲು ಭಾರತ ಸರ್ಕಾರ ಇಲ್ಲಿನ ನಾಗರಿಕತ್ವವನ್ನು ನೀಡಿದೆ.