ಇಂದಿನಿಂದ ಮೂರು ದಿನಗಳ ಕಾಲ ಪ್ರತಿನಿತ್ಯ 6000 ಕ್ಯೂಸೆಕ್ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರದಂದು ಆದೇಶ ನೀಡಿದ್ದ ಹಿನ್ನಲೆಯಲ್ಲಿ ಇಂದು ಕರೆಯಲಾಗಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ.
ಸೆಪ್ಟೆಂಬರ್ 29 ರ ನಾಳೆ ಬೆಳಿಗ್ಗೆ 11.30 ಕ್ಕೆ ನವದೆಹಲಿಯ ಶ್ರಮಶಕ್ತಿ ಭವನದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಉಭಯ ರಾಜ್ಯಗಳ ಸಭೆ ಕರೆಯಲಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಹಾಜರಾಗಲು ಸೂಚಿಸಲಾಗಿದ್ದು, ಹೀಗಾಗಿ ನಾಳೆವರೆಗೂ ಕಾದು ನೋಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಇಂದಿನ ಸರ್ವ ಪಕ್ಷಗಳ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ರೈತ ಮುಖಂಡರುಗಳು ಭಾಗವಹಿಸಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಜಲಸಂಪನ್ಮೂಲ ಇಲಾಖೆಯಿಂದ ನಾಳೆ ಸಭೆ ಕರೆದಿರುವ ಹಿನ್ನಲೆಯಲ್ಲಿ ಅಲ್ಲಿಯವರೆಗೂ ಕಾದು ನೋಡೋಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಮಂತ್ರಿ ಪರಿಷತ್ ಸಭೆಯಲ್ಲೂ ಈ ಕುರಿತು ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.