ಬೆಂಗಳೂರು: ಪ್ರತಿ ದಿನ 6,000 ಕ್ಯೂಸೆಕ್ ನಂತೆ, 3 ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ ಆದೇಶದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಪಕ್ಷ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ. 3 ದಿನಗಳ ಕಾಲ 18,000 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ದುರಾದೃಷ್ಟಕರ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರ ವಕೀಲರಾದ ಫಾಲಿ ಎಸ್. ನಾರಿಮನ್ ರಾಜ್ಯದ ಸಂಕಷ್ಟ ಸ್ಥಿತಿಯನ್ನು ವಿವರಿಸಿದ್ದರೂ, ಕೋರ್ಟ್ ನೀರು ಬಿಡುವಂತೆ ಹೇಳಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಕರೆದು, ಕುಡಿಯುವ ನೀರಿಗೆ ಕಾವೇರಿ ನೀರನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಮತ್ತೆ ಅಧಿವೇಶನ ಕರೆಯಬೇಕಿಲ್ಲ. ಪ್ರಧಾನಿ ಮಧ್ಯಸ್ಥಿಕೆಗೆ ಅವಕಾಶವಿದ್ದರೆ, ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆನ್ನಲಾಗಿದೆ.