ವಿವಾಹಿತೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ ಬಳಿಕ ಆತನ ಶವವನ್ನು ಬೈಕ್ ನ ಮಧ್ಯದಲ್ಲಿರಿಸಿಕೊಂಡು ಮಧ್ಯ ರಾತ್ರಿ ಸುತ್ತುತ್ತಿರುವ ವೇಳೆ ಗಸ್ತಿನಲ್ಲಿದ್ದ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ನಲ್ಗೊಂಡಾದ 25 ವರ್ಷದ ಪ್ರವಲ್ಲಿಕಾ ಮೆಂಡಮ್ ಎಂಬಾಕೆಯ ವಿವಾಹ ಪುಲ್ಲಯ್ಯ ಮೆಂಡಮ್ ಎಂಬಾತನೊಂದಿಗೆ ನೆರವೇರಿತ್ತು. ಈಕೆ 10 ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಬಾಲಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದು ಬೆಳಕಿಗೆ ಬಂದ ಬಳಿಕ ರಾಜಿ ಪಂಚಾಯ್ತಿ ನಡೆಸಿದ ಊರಿನ ಮುಖಂಡರು, ಊರು ಬಿಟ್ಟು ತೆರಳಲು ಸೂಚಿಸಿದ ಹಿನ್ನಲೆಯಲ್ಲಿ ಕೆಲ ವಾರದ ಹಿಂದಷ್ಟೇ ಹೈದರಾಬಾದಿಗೆ ಬಂದು ನೆಲೆಸಿದ್ದರು.
ಆದರೂ ತನ್ನ ಚಾಳಿ ಬಿಡದ ಪ್ರವಲ್ಲಿಕಾ, ಬಾಲಕನನ್ನು ಕರೆಸಿಕೊಂಡಿದ್ದು, ಶನಿವಾರದಂದು ಇಬ್ಬರೂ ಸೇರಿ ಪುಲ್ಲಯ್ಯನ ಹತ್ಯೆ ಮಾಡಿದ್ದಾರೆ. ಬಳಿಕ ನೆರೆಮನೆಯ ವ್ಯಕ್ತಿಯಿಂದ ಬೈಕ್ ಪಡೆದು ಪುಲ್ಲಯ್ಯನ ಶವವನ್ನು ಸಾಗಿಸಲು ಮುಂದಾಗಿದ್ದಾರೆ. ಮಧ್ಯದಲ್ಲಿ ಶವವನ್ನಿಟ್ಟುಕೊಂಡು ರಾತ್ರಿ 11-30 ರ ಸುಮಾರಿಗೆ ಹೋಗುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ತ್ರಿಬ್ಬಲ್ ರೈಡಿಂಗ್ ಹೋಗುತ್ತಿದ್ದಾರೆಂದು ಭಾವಿಸಿದ ಪೊಲೀಸರು ಬೈಕ್ ನಿಲ್ಲಿಸಲು ಸೂಚಿಸಿದ್ದು, ಆದರೆ ಅದನ್ನು ನಿರ್ಲಕ್ಷಿಸಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ.
ಗಸ್ತು ಪೊಲೀಸರು ತಮ್ಮ ಬೈಕ್ ನಲ್ಲಿ ಸುಮಾರು 2 ಕಿ.ಮೀ. ವರೆಗೆ ಇವರುಗಳ ಬೆನ್ನಟ್ಟಿ ಹೋಗಿ ಹಿಡಿದಿದ್ದು, ಈ ಸಂದರ್ಭದಲ್ಲಿ ತನ್ನ ಪತಿ ಕಂಠಪೂರ್ತಿ ಕುಡಿದಿದ್ದು, ರಸ್ತೆಯಲ್ಲಿ ಬಿದ್ದಿದ್ದ ಆತನನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಪ್ರವಲ್ಲಿಕಾ ಸುಳ್ಳು ಹೇಳಿದ್ದಾಳೆ. ಆದರೆ ಮಧ್ಯ ಕುಳಿತಿದ್ದ ವ್ಯಕ್ತಿಯಲ್ಲಿ ಯಾವುದೇ ಚಲನೆ ಇಲ್ಲದಿರುವುದನ್ನು ಕಂಡು ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಿಗೆ ಬಿದ್ದಿದೆ. ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.