ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ‘ಅಮ್ಮಾ’ ಹೆಸರಿನ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಪೈಕಿ ‘ಅಮ್ಮಾ ಕ್ಯಾಂಟೀನ್’ ಕೂಡಾ ಒಂದು. ಸುಲಭ ದರದಲ್ಲಿ ಶುಚಿ, ರುಚಿಯಾದ ಆಹಾರವನ್ನು ಗ್ರಾಹಕರಿಗೆ ನೀಡುವ ಯೋಜನೆ ಭಾರೀ ಜನಪ್ರಿಯತೆ ಗಳಿಸಿದ್ದು, ದೇಶದ ಹಲವು ರಾಜ್ಯಗಳು ಇದನ್ನು ಜಾರಿಗೊಳಿಸಲು ಮುಂದಾಗಿವೆ.
ತಮಿಳುನಾಡಿನಾದ್ಯಂತ ತೆರೆಯಲಾಗಿರುವ 300 ‘ಅಮ್ಮಾ ಕ್ಯಾಂಟೀನ್’ ಗಳಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ಆಹಾರ ಸೇವಿಸುತ್ತಿದ್ದು, ಚೆನ್ನೈ ಒಂದರಲ್ಲೇ 107 ಅಮ್ಮಾ ಕ್ಯಾಂಟೀನ್ ಗಳಿವೆ. ಇಲ್ಲಿಯವರೆಗೂ ಬರೋಬ್ಬರಿ 33.60 ಕೋಟಿ ಇಡ್ಲಿಗಳು ಹಾಗೂ 17.38 ಕೋಟಿ ಚಪಾತಿಗಳನ್ನು ‘ಅಮ್ಮಾ ಕ್ಯಾಂಟೀನ್’ ನಲ್ಲಿ ಮಾರಾಟ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ‘ಅಮ್ಮಾ ಕ್ಯಾಂಟೀನ್’ ಗಳು ಆರಂಭವಾಗುತ್ತಿದ್ದು, ಮಾರಾಟದಲ್ಲಿ ದಾಖಲೆ ಮಾಡುವ ನಿರೀಕ್ಷೆ ಇದೆ.