ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದ ಯುವಕನೊಬ್ಬ, ಮಹಿಳೆಯೊಬ್ಬರು ತಮ್ಮ ಪತಿ ಹಾಗೂ ಪುತ್ರಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಸಾರ್ವಜನಿಕವಾಗಿಯೇ ಆಕೆಯ ಬಟ್ಟೆ ಸೆಳೆದಿರುವ ಘಟನೆ ಲೂಧಿಯಾನಾದ ಜಾಗ್ರೋಂನ್ ನಲ್ಲಿ ನಡೆದಿದೆ.
ಸೋಮವಾರ ರಾತ್ರಿ 10-30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೊದಲಿಗೆ ದೂರು ನೀಡಲು ಹಿಂದೇಟು ಹಾಕಿದ್ದ ಮಹಿಳೆ, ಬಳಿಕ ಬುಧವಾರದಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳ ಪೈಕಿ ಒಬ್ಬಾತನನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಮನಿಜ ಎಂಬಾತ ತನ್ನ ಸ್ನೇಹಿತರಾದ ರವಿಕುಮಾರ್ ಹಾಗೂ ಮತ್ತೊಬ್ಬನ ಬಳಿ ಮಹಿಳೆಯ ಬಟ್ಟೆ ಸೆಳೆಯುವ ಕುರಿತು 8 ಸಾವಿರ ರೂಪಾಯಿ ಬೆಟ್ ಕಟ್ಟಿದ್ದನೆನ್ನಲಾಗಿದೆ. ಸೋಮವಾರ ರಾತ್ರಿ ಊಟವಾದ ಬಳಿಕ ಮಹಿಳೆ ತನ್ನ ಪತಿ ಹಾಗೂ 13 ವರ್ಷದ ಮಗಳ ಜೊತೆ ವಾಕಿಂಗ್ ಮಾಡುತ್ತಿರುವಾಗ ಹಿಂಬದಿಯಿಂದ ಬಂದ ಮನಿಜ, ಆಕೆಯ ಬಟ್ಟೆ ಸೆಳೆದಿದ್ದಾನೆ. ಈ ವೇಳೆ ಮಹಿಳೆಯ ಪತಿ ಕೂಗಿಕೊಂಡಿದ್ದು, ನೆರವಿಗೆ ಧಾವಿಸಿ ಬಂದ ಸ್ಥಳೀಯರು ಒಬ್ಬನನ್ನು ಹಿಡಿದು ಥಳಿಸಿ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಮರ್ಯಾದೆಗಂಜಿದ ಮಹಿಳೆ ಮತ್ತವರ ಪತಿ, ದೂರು ನೀಡಲು ಹಿಂದೇಟು ಹಾಕಿದ್ದರಾದರೂ ಬಳಿಕ ದೂರು ದಾಖಲಿಸಿದ್ದಾರೆ. ಬಂಧಿತನಾಗಿರುವ ರವಿಕುಮಾರ್ ಅಪರಾಧ ಹಿನ್ನಲೆಯುಳ್ಳವನೆಂದು ಹೇಳಲಾಗಿದ್ದು, ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.