ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿಸುವ ಸಲುವಾಗಿ ಮನೆಯಲ್ಲಿ ಟಾಯ್ಲೆಟ್ ಕಟ್ಟಿಸದವರ ಮಾನ ಕಳೆಯಲು ಮುಂದಾದ ಛತ್ತೀಸ್ ಘಡದ ಸ್ಥಳೀಯಾಡಳಿತ ಈಗ ತಾನೇ ತೊಂದರೆಯಲ್ಲಿ ಸಿಲುಕಿಕೊಳ್ಳುವಂತಾಗಿದೆ.
ಛತ್ತೀಸ್ ಘಡದ ಮಹಾಸಮುಂದ್ ಜಿಲ್ಲೆಯ ಗ್ರಾಮವೊಂದರಲ್ಲಿ ಸ್ವಚ್ಚ ಭಾರತ್ ಅಭಿಯಾನ ನಡೆಸಿದ ಸ್ಥಳೀಯಾಡಳಿತ, ಗ್ರಾಮದಲ್ಲಿ ಶೌಚಾಲಯ ಕಟ್ಟಿಸಿಕೊಳ್ಳದವರ ಮನೆಯ ಗೋಡೆ ಮೇಲೆ ‘ನನ್ನ ಮನೆಯಲ್ಲಿ ಶೌಚಾಲಯವಿಲ್ಲ. ನಾನು ಬಯಲಿನಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತೇನೆ’ ಎಂಬ ಘೋಷಣೆಯನ್ನು ಬರೆದಿದೆ.
ಇದು ಈಗ ಗ್ರಾಮಸ್ಥರನ್ನು ಕೆರಳಿಸಿದ್ದು, ಬಡವರನ್ನು ಈ ಮೂಲಕ ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನದ ತುತ್ತಿಗೂ ಪರದಾಡುವ ಕೂಲಿ ಕಾರ್ಮಿಕರು ಟಾಯ್ಲೆಟ್ ಕಟ್ಟಿಸಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಸ್ಥಳೀಯಾಡಳಿತಕ್ಕೆ ಬಡವರ ಮೇಲೆ ನಿಜವಾಗಿಯೂ ಕಾಳಜಿಯಿದ್ದರೆ ಸರ್ಕಾರದ ಹಣದಲ್ಲಿ ನಿರ್ಮಿಸಿಕೊಡಲಿ ಎಂದಿದ್ದಾರೆ. ಅಷ್ಟೇ ಅಲ್ಲ ಮನೆ ಗೋಡೆ ಮೇಲೆ ಘೋಷಣೆ ಬರೆಯುವ ಮೂಲಕ ಅವಮಾನ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ. ಇದೀಗ ಗೋಡೆ ಮೇಲಿನ ಬರಹವನ್ನು ಅಳಿಸಿ ಹಾಕುವ ಕಾರ್ಯ ಮಾಡಲಾಗುತ್ತಿದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, ಘೋಷಣೆ ಬರೆಯುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿಲ್ಲ. ಗ್ರಾಮ ಪಂಚಾಯಿತಿಯವರೇ ಈ ಕಾರ್ಯ ಮಾಡಿದ್ದಾರೆಂದು ಸಮಜಾಯಿಷಿ ನೀಡಿದ್ದಾರೆ.