ಕೊಚ್ಚಿ: ಕೇರಳದ ಕೊಚ್ಚಿ ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. 53 ವರ್ಷದ ನಾಯಕ್ ಶಿವದಾಸನ್ ಸಾವು ಕಂಡವರು. ಭಾನುವಾರ ರಾತ್ರಿ ಅವರಿಗೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ.
ಶಿವದಾಸನ್ ಅವರು ಕೇರಳದ ತ್ರಿಶೂರ್ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಕೊಚ್ಚಿಯ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಅವರು ಗುಂಡೇಟಿಗೆ ಬಲಿಯಾಗಿದ್ದಾರೆ. ಗುಂಡು ಆಕಸ್ಮಿಕವಾಗಿ ಹಾರಿದೆಯೇ ಅಥವಾ ಬೇರೆಯವರು ಶೂಟ್ ಮಾಡಿರಬಹುದೇ ಎಂಬ ಕುರಿತು ಶಂಕೆ ವ್ಯಕ್ತವಾಗಿದೆ. ಸಿಬ್ಬಂದಿ ನಡುವೆ ಜಗಳ ಉಂಟಾಗಿ ಗುಂಡು ಹಾರಿಸಿರಬಹುದೆಂದು ಹೇಳಲಾಗಿದೆ. ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ನೌಕಾದಳದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಶಿವದಾಸನ್ ಕೊಚ್ಚಿಯ ನೌಕಾನೆಲೆಯಲ್ಲಿ ಎಲ್ಲರೊಂದಿಗೂ ಆತ್ಮೀಯರಾಗಿದ್ದು, ಅವರ ಸಾವು ಅನುಮಾನಕ್ಕೆ ಕಾರಣವಾಗಿದೆ.