ಮರಾಠಿ ಚಿತ್ರವೊಂದು ಇದೇ ಮೊದಲ ಬಾರಿಗೆ ಗಳಿಕೆಯಲ್ಲಿ ಭಾರೀ ದಾಖಲೆ ಮಾಡುತ್ತಿದೆ. ಬಿಡುಗಡೆಯಾದ ಮೂರು ವಾರಗಳಲ್ಲೇ 65 ಕೋಟಿ ರೂ. ಗಳಿಸಿರುವ ಈ ಚಿತ್ರ ಈಗಲೂ ಪ್ರತಿ ನಿತ್ಯ 525 ಪ್ರದರ್ಶನ ಕಾಣುತ್ತಿದೆ.
ಕೇವಲ 4 ಕೋಟಿ ರೂ. ಬಜೆಟ್ ನಲ್ಲಿ ತಯಾರಾದ ಈ ಚಿತ್ರ ಬಿಡುಗಡೆಗೊಂಡ ನಾಲ್ಕನೇ ವಾರದಲ್ಲೂ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿರುವುದು ಬಾಲಿವುಡ್ ಪಂಡಿತರನ್ನು ಅಚ್ಚರಿಗೀಡು ಮಾಡಿದೆ. ಬಾಲಿವುಡ್ ಸಿನಿಮಾಗಳ ಅಬ್ಬರದಲ್ಲಿ ನಲುಗಿ ಹೋಗಿದ್ದ ಮರಾಠಿ ಚಿತ್ರರಂಗಕ್ಕೆ ಈ ಚಿತ್ರದ ಯಶಸ್ಸು ಹೊಸ ಭರವಸೆಯನ್ನು ಹುಟ್ಟಿಸಿದೆ.
ನಾಗರಾಜ್ ಮಂಜುಳೆ ನಿರ್ದೇಶನದ ಈ ಚಿತ್ರ ಮೇಲ್ವರ್ಗದ ಹುಡುಗಿ ಹಾಗೂ ಕೆಳ ವರ್ಗದ ಹುಡುಗನ ನಡುವಿನ ಪ್ರೇಮಕಥೆಯನ್ನು ಹೊಂದಿದ್ದು, ಅವರುಗಳು ಎದುರಿಸುವ ಸಂಕಷ್ಟಗಳ ವಾಸ್ತವ ಚಿತ್ರಣವನ್ನು ಸಮರ್ಥವಾಗಿ ತೆರೆದಿಟ್ಟಿದೆ. ತಮ್ಮ ಚಿತ್ರದ ಯಶಸ್ಸಿನಿಂದ ಸಂತಸಗೊಂಡಿರುವ ನಿರ್ಮಾಪಕರು, ಚಿತ್ರದ ನಾಯಕ ಹಾಗೂ ನಾಯಕಿಗೆ ಹೆಚ್ಚುವರಿಯಾಗಿ ತಲಾ 5 ಕೋಟಿ ರೂ. ಗಳನ್ನು ನೀಡುತ್ತಿದ್ದಾರಲ್ಲದೇ ಚಿತ್ರತಂಡಕ್ಕೂ ಬೋನಸ್ ನೀಡಲು ಮುಂದಾಗಿದ್ದಾರೆ.