ಟೀಂ ಇಂಡಿಯಾ 500 ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಇದೇ 22ರಿಂದ ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲನೆಯ ಟೆಸ್ಟ್ ಪಂದ್ಯ, ಭಾರತದ ಪಾಲಿಗೆ 500 ನೇ ಟೆಸ್ಟ್.
ಭಾರತ ತಂಡ ಈ ಸಂಭ್ರಮವನ್ನು ಕಾನ್ಪುರದಲ್ಲಿ ಆಚರಿಸಿದೆ. ನಾಯಕ ವಿರಾಟ್ ಕೊಹ್ಲಿ ವಿಶೇಷ ಕೇಕ್ ಕತ್ತರಿಸುವ ಮೂಲಕ 500ನೇ ಪಂದ್ಯದ ಖುಷಿಯನ್ನು ಇಮ್ಮಡಿಗೊಳಿಸಿದ್ರು. ಟೆಸ್ಟ್ ಪಂದ್ಯ ಆಡಲು ಈಗಾಗ್ಲೇ ಟೀಂ ಇಂಡಿಯಾ ಕಾನ್ಪುರ ತಲುಪಿದೆ. ಕಿವೀಸ್ ಪಡೆ ನಾಳೆ ಆಗಮಿಸಲಿದೆ.
ದಾಖಲೆಯ 500 ನೇ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲು ಬಿಸಿಸಿಐ, ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್, ದಿಲೀಪ್ ವೆಂಗಸರ್ಕಾರ್, ಕೃಷ್ಣಮಾಚಾರಿ ಶ್ರೀಕಾಂತ್ ಹಾಗೂ ಮೊಹಮ್ಮದ್ ಅಜರುದ್ದೀನ್ ಅವರಿಗೆ ಆಹ್ವಾನ ನೀಡಿದೆ.
ಆದ್ರೆ ಅಜರ್ ಗೆ ಆಹ್ವಾನ ನೀಡಿರುವುದು ಅಚ್ಚರಿ ಮೂಡಿಸಿದೆ. 2000ನೇ ಇಸ್ವಿಯಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಬಿಸಿಸಿಐ ಅಜರ್ ಅವ್ರನ್ನ ದೂರವೇ ಇಟ್ಟಿತ್ತು.