ಆಪಲ್ ಐಫೋನ್ ಬಗ್ಗೆ ಜಗತ್ತಿನ ಜನರಿಗಿರುವ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ವಿಶ್ವದ 28 ದೇಶಗಳಲ್ಲಿ ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಮಾರಾಟ ಶುರುವಾಗಿದೆ. ಕೆಲ ದೇಶಗಳ ಜನರು ಐಫೋನ್ ಖರೀದಿಗೆ ಎಷ್ಟು ಉತ್ಸುಕರಾಗಿದ್ದಾರೆಂದ್ರೆ ಫೋನ್ ಪಡೆಯಲು ಕಳೆದ ಎರಡು ದಿನಗಳಿಂದ ಮಳಿಗೆ ಮುಂದೆ ಟೆಂಟ್ ಹಾಕಿ ಕುಳಿತಿದ್ದಾರೆ.
ವಿಶೇಷ ಅಂದ್ರೆ ಸಿಡ್ನಿಯಲ್ಲಿ 16 ವರ್ಷದ ಯುವಕನೊಬ್ಬ ಐಫೋನ್ ಖರೀದಿಗಾಗಿ 1.25 ಲಕ್ಷ ರೂಪಾಯಿ ಹಣದ ಆಫರ್ ತಿರಸ್ಕರಿಸಿದ್ದಾನೆ. ಮಾರ್ಕಸ್ ಹೆಸರಿನ ಯುವಕ ಸಿಡ್ನಿ ಅಂಗಡಿ ಮುಂದೆ 30 ಗಂಟೆಗಳಿಂದ ನಿಂತಿದ್ದ. ಸರತಿ ಸಾಲಿನಲ್ಲಿ ಮೊದಲನೆಯವನಾಗಿದ್ದ. ಆದ್ರೆ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬ 1.25 ಲಕ್ಷ ರೂಪಾಯಿ ನೀಡುತ್ತೇನೆ. ಸರತಿ ಸಾಲಿನಿಂದ ಹೊರಗೆ ಬಾ ಎಂದಿದ್ದಾನೆ. ಆದ್ರೆ ಮಾರ್ಕಸ್ ಈ ಆಫರ್ ಅಲ್ಲಗಳೆದು ಐಫೋನ್ ಖರೀದಿ ಮಾಡಿದ್ದಾನೆ.
ಇನ್ನು ಭಾರತ,ನೇಪಾಳ ಹಾಗೂ ನೆದರ್ಲ್ಯಾಂಡ್ ಜನರು ಐಫೋನ್ ಖರೀದಿಗಾಗಿ ಲಂಡನ್ ತಲುಪಿದ್ದಾರೆ. ಅಂಗಡಿ ತೆರೆಯುತ್ತಿದ್ದಂತೆ ಕಾದು ಕುಳಿತಿದ್ದ ಕೆಲ ಗ್ರಾಹಕರಿಗೆ ನಿರಾಸೆ ಕೂಡ ಆಗ್ತಿದೆ. ಅವರ ನೆಚ್ಚಿನ ಕಪ್ಪು ಬಣ್ಣದ ಫೋನ್ ಈಗಾಗಲೇ ಖಾಲಿಯಾಗಿರುವುದೇ ಅದಕ್ಕೆ ಕಾರಣ.
ಲಂಡನ್ ನಲ್ಲಿ ಭಾರೀ ಮಳೆಯಾಗ್ತಿದ್ದರೂ ಜನರು ಅದನ್ನು ಲೆಕ್ಕಿಸುತ್ತಿಲ್ಲ. ಜರ್ಮನಿಯ ಹ್ಯಾಂಬರ್ಗ್ ಮತ್ತು ಬರ್ಲಿನ್ ನಲ್ಲಿ ಚಳಿ ಇದ್ದು, ರಗ್ಗು ಹೊದ್ದು ಅಂಗಡಿ ಮುಂದೆ ನಿಂತಿದ್ದಾರೆ ಗ್ರಾಹಕರು. ಚೀನಾದ ಶಾಂಘೈನ ಅಂಗಡಿ ಮುಂದೆಯೇ ಟೆಂಟ್ ಹಾಕಿ ಕುಳಿತಿರುವ ಗ್ರಾಹಕರು ಒಂದೇ ಬಾರಿ ಎರಡು ಫೋನ್ ಖರೀದಿಸುವ ಕನಸು ಕಾಣ್ತಿದ್ದಾರೆ.