ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು, ಮತ್ತೊಂದು ವಿವಾದದ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಅವರ ರಕ್ಷಣೆಗೆ ಬದ್ಧ ಎಂದು ತಿಳಿಸಿದ್ದಾರೆ.
ಕೆ.ಪಿ.ಎಸ್.ಸಿ. ಅಕ್ರಮ ನೇಮಕಾತಿ ಪ್ರಕರಣದಲ್ಲಿ ಗೋನಾಳ್ ಭೀಮಪ್ಪ ಆರೋಪಿತರಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಮಾದಿಗ ದಂಡೋರ ಸಮಿತಿಯಿಂದ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮಾದಿಗ ಸಮಾಜದ ಚುನಾಯಿತ ಪ್ರತಿನಿಧಿಗಳ ಸಮ್ಮೇಳನದಲ್ಲಿ ಮಾತನಾಡಿದ ಆಂಜನೇಯ ಅವರು, ಭೀಮಪ್ಪ ನನ್ನ ತಂಗಿಯ ಗಂಡ. ಅವರನ್ನು ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಭೀಮಪ್ಪನವರಿಗೆ ಎಲ್ಲಾ ರೀತಿಯ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದ್ದಾರೆನ್ನಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಗೋನಾಳ್ ಭೀಮಪ್ಪನವರಿಗೆ ರಕ್ಷಣೆ ಕೊಡಿ ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮಾತನಾಡಿದ ಆಂಜನೇಯ ಅವರು, ಗೋನಾಳ್ ಭೀಮಪ್ಪನವರನ್ನು ಹಿಂದೆಯೂ ರಕ್ಷಿಸಿದ್ದೇವೆ. ಮುಂದೆಯೂ ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ.