ಮಂಗಳೂರು: ತಾವು ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆಯುವುದಾಗಿ, ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಡಿ.ವೈ.ಎಸ್.ಪಿ.ಯಾಗಿದ್ದ ಅನುಪಮಾ ಶೆಣೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅನುಪಮಾ ಶೆಣೈ ಅವರು, ರಾಜೀನಾಮೆ ವಾಪಸ್ ಪಡೆಯುವುದಾಗಿ ಆಗಸ್ಟ್ 29 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದರೆ ಸರ್ಕಾರದಿಂದ ಉತ್ತರ ಬಂದಿಲ್ಲ. 5 ದಿನಗಳಲ್ಲಿಯೇ ರಾಜೀನಾಮೆ ಅಂಗೀಕರಿಸಿದ್ದ ಸರ್ಕಾರ, ಈ ವಿಚಾರದಲ್ಲಿ ನಿಧಾನಗತಿ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ರಾಜೀನಾಮೆ ವಾಪಸ್ ಪಡೆಯುವುದಾಗಿ ಪತ್ರ ಬರೆದ ನಂತರ, ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಸ್ಪಂದಿಸಿದ್ದಾರೆ. ದೂರವಾಣಿ ಮೂಲಕ ಮಾತನಾಡಿ, ರಾಜೀನಾಮೆ ಕೊಡುವುದು, ವಾಪಸ್ ಪಡೆಯುವುದು ಏಕೆ ಎಂದು ಪ್ರಶ್ನಿಸಿದರು. ಅವರಿಗೆ ಅಂದಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟ ನಂತರ, ನನಗೂ ರಾಜೀನಾಮೆ ಕೊಡುವಂತಹ ಪರಿಸ್ಥಿತಿ ಬಂದಿತ್ತು ಎಂದು ಹೇಳಿದ್ದಾಗಿ ಅನುಪಮಾ ಶೆಣೈ ತಿಳಿಸಿದ್ದಾರೆ.