ಬಾಲಿವುಡ್ ನಟಿ ವಿದ್ಯಾ ಬಾಲನ್ ಗೆ ಡೆಂಘಿ ಜ್ವರ ಶುರುವಾಗಿದೆ. ವೈದ್ಯರು ಮನೆಯಲ್ಲೇ ವಿದ್ಯಾಗೆ ಚಿಕಿತ್ಸೆ ಕೊಡ್ತಿದ್ದಾರಂತೆ. ಈ ಮಧ್ಯೆ ವಿದ್ಯಾ ಬಾಲನ್ ನೆರೆಮನೆಯವರೇ ಆದ ನಟ ಶಾಹಿದ್ ಕಪೂರ್ ಗೆ ಬಿಎಂಸಿ ನೋಟಿಸ್ ನೀಡಿದೆ.
ಇವರಿಬ್ಬರ ಮನೆ ಇರೋದು ಮುಂಬೈನ ಜುಹು ತಾರಾದಲ್ಲಿ. ಅಪಾರ್ಟ್ ಮೆಂಟ್ ಒಳಕ್ಕೆ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯಲು ವಿಫಲರಾಗಿದ್ದಾರೆ ಅನ್ನೋ ಕಾರಣಕ್ಕೆ ಶಾಹಿದ್ ಗೆ ನೋಟಿಸ್ ನೀಡಲಾಗಿದೆ.
ಶುಕ್ರವಾರ ಬಿಎಂಸಿ ಅಧಿಕಾರಿಗಳು ಅಪಾರ್ಟ್ ಮೆಂಟ್ ನಲ್ಲಿ ಪರಿಶೀಲನೆ ನಡೆಸಿದ್ರು. ಶಾಹಿದ್ ಕಪೂರ್ ಮನೆಯ ಸ್ವಿಮ್ಮಿಂಗ್ ಪೂಲ್ ಬಳಸದೆ ಹಾಗೇ ಬಿಟ್ಟಿರೋದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಶಾಹಿದ್ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅನ್ನೋ ಕಾರಣಕ್ಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಅಷ್ಟೇ ಅಲ್ಲ ಶಾಹಿದ್ ಕಪೂರ್ 10,000 ರೂಪಾಯಿ ದಂಡ ಕೂಡ ಕಟ್ಟಬೇಕಾಗಿ ಬರಬಹುದು. ವಿದ್ಯಾ ಬಾಲನ್ ಮನೆಯಿಂದ ಎರಡು ಮಹಡಿ ಕೆಳಕ್ಕೆ ಶಾಹಿದ್ ನಿವಾಸವಿದೆ. ಇದೇ ಅಪಾರ್ಟ್ ಮೆಂಟ್ ನ ಮತ್ತೋರ್ವ ನಿವಾಸಿಗೂ ನೋಟಿಸ್ ಜಾರಿ ಮಾಡಲಾಗಿದೆ. ಮುಂಬೈನಲ್ಲಿ ದಿನೇ ದಿನೇ ಡೆಂಘಿ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಕೇವಲ 11 ದಿನಗಳಲ್ಲಿ 1500 ಮಂದಿ ಆಸ್ಪತ್ರೆಗೆ ದಾಖಲಾಗಿರೋದು ಆತಂಕ ಮೂಡಿಸಿದೆ.