ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17 ರ ಶನಿವಾರದಂದು ತಮ್ಮ 66 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಗುಜರಾತ್ ಗೆ ತೆರಳಲಿರುವ ಅವರು, ತಾಯಿಯವರ ಅಶೀರ್ವಾದ ಪಡೆದ ಬಳಿಕ ಬುಡಕಟ್ಟು ಜನಾಂಗದವರ ಜೊತೆ ಕಾಲ ಕಳೆಯಲಿದ್ದಾರೆ.
ಇದೇ ಸಂದರ್ಭದಲ್ಲಿ ಸೂರತ್ ಮೂಲದ ಬೇಕರಿಯೊಂದರ ಮಾಲೀಕರು, ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆಗೂಡಿ ಪಿರಮಿಡ್ ಆಕಾರದ ಬೃಹತ್ ಕೇಕ್ ತಯಾರಿಸಿದ್ದು, ಇದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಸೂರತ್ ನ ‘ಅತುಲ್ ಬೇಕರಿ’ ಸ್ವಯಂ ಸೇವಾ ಸಂಸ್ಥೆ ‘ಶಕ್ತಿ ಫೌಂಡೇಶನ್’ ಜೊತೆಗೂಡಿ ಈ ಕೇಕ್ ತಯಾರಿಸಿದ್ದು, ಮಹಿಳಾ ಸಬಲೀಕರಣಕ್ಕಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಹಮ್ಮಿಕೊಂಡಿರುವ ಕಾರಣ ಅವರ ಹುಟ್ಟು ಹಬ್ಬದಂದು 5 ಸಾವಿರಕ್ಕೂ ಅಧಿಕ ಮಹಿಳೆಯರ ಸಮ್ಮುಖದಲ್ಲಿ ಈ ಕೇಕ್ ಕತ್ತರಿಸಿ ಮೋದಿಯವರ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ. 20 ಕ್ಕೂ ಅಧಿಕ ಬಾಣಸಿಗರು ಹಲವು ದಿನಗಳ ಕಾಲ ಶ್ರಮಿಸಿ ಈ ಕೇಕ್ ತಯಾರಿಸಿದ್ದು, ಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.