ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಶ್ರವಣ ಗಾಣಿಗೇರ ಹಾಗೂ 23 ವರ್ಷದ ರೇಣುಕಾ ಗಾಣಿಗೇರ ಅವರು, ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಶ್ರವಣ ಗಾಣಿಗೇರ ಹಾಗೂ ರೇಣುಕಾ ಅವರಿಗೆ ಮದುವೆಯಾಗಿದ್ದು, ರೇಣುಕಾ 7 ತಿಂಗಳ ಗರ್ಭಿಣಿಯಾಗಿದ್ದಾರೆ. ಇಂದು ಶ್ರವಣ ಅವರಿಗೆ ಹೃದಯಾಘಾತವಾಗಿದ್ದು, ಕುಟುಂಬದವರು ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪತಿ ಮೃತಪಟ್ಟ ಸುದ್ದಿ ಕೇಳಿದ ರೇಣುಕಾ ಅವರೂ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ದಂಪತಿಯ ಸಾವಿಗೆ ಊರಿಗೆ ಊರೇ ಕಂಬನಿ ಮಿಡಿದಿದೆ.