ಬೆಂಗಳೂರು: ರಾಜಕಾರಣಿಗಳು, ಪತ್ರಕರ್ತರು, ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ 13 ಮಂದಿಗೆ 5 ವರ್ಷದ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಲೋಕಸಭೆ ಸದಸ್ಯ ಪ್ರತಾಪ್ ಸಿಂಹ, ಪತ್ರಕರ್ತ ವಿಶ್ವೇಶ್ವರ್ ಭಟ್ ಸೇರಿದಂತೆ ಹಲವಾರು ಉದ್ಯಮಿಗಳು, ಹಿಂದೂ ಸಂಘಟನೆಯ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ 13 ಮಂದಿ ಆರೋಪಿಗಳು ತಪ್ಪಿತಸ್ಥರೆಂದು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, 13 ಮಂದಿ ಅಪರಾಧಿಗಳಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ 7,000 ರೂ. ದಂಡ ವಿಧಿಸಿ ಆದೇಶಿಸಿದೆ.
ಶೋಯಿಬ್ ಅಹಮದ್ ಮಿರ್ಜಾ, ಮಹಮ್ಮದ್ ಸಾಧಿಕ್ ಲಷ್ಕರ್, ಡಾ. ಇಮ್ರಾನ್ ಅಹಮ್ಮದ್ ಸೇರಿದಂತೆ 13 ಮಂದಿ ಶಿಕ್ಷೆಗೊಳಗಾಗಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವಿಳಂಬವಾದ ಹಿನ್ನಲೆಯಲ್ಲಿ ಆರೋಪಿತರೇ ತಪ್ಪೊಪ್ಪಿಕೊಂಡು ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದರೆಂದು ಹೇಳಲಾಗಿದೆ.