ಬಿಬಿಎಂಪಿ ಮೇಯರ್- ಉಪ ಮೇಯರ್ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿದೆಗರಿವೆ. ಕಳೆದ ಬಾರಿಯ ಮೇಯರ್- ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಜೆಡಿಎಸ್, ಈ ಬಾರಿ ಬಿಜೆಪಿಗೆ ಬೆಂಬಲ ನೀಡುತ್ತಾ ಎಂಬ ಕುತೂಹಲ ಮೂಡಿದೆ.
ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಮೇಯರ್ ಸ್ಥಾನವನ್ನು ಬಿಟ್ಟು ಕೊಡಲು ಸಿದ್ದವಿಲ್ಲವೆಂದು ಹೇಳುವ ಮೂಲಕ ಉಪ ಮೇಯರ್ ಸ್ಥಾನ ಪಡೆಯಲು ಒಪ್ಪುವುದಾದರೆ ಮಾತ್ರ ಜೆಡಿಎಸ್ ಜೊತೆ ಮೈತ್ರಿ ಎಂಬ ಸಂದೇಶ ರವಾನಿಸಿದ್ದಾರೆ.
ಮೇಯರ್ ಸ್ಥಾನ ಬಿಟ್ಟು ಕೊಡುವ ಮೂಲಕ ನಾವು ಗೊಂದಲಕ್ಕೆ ಸಿಲುಕಲು ಬಯಸುವುದಿಲ್ಲ. ಇದು ಪಕ್ಷದ ನಾಯಕರಿಗೂ ಸ್ಪಷ್ಟವಾಗಿ ತಿಳಿದಿದೆ. ತಾವು ಈ ಕುರಿತು ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಆದರೆ ಬೆಂಗಳೂರು ನಾಯಕರು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ಯಡಿಯೂರಪ್ಪ ಹೇಳಿದ್ದಾರೆ.
ಜೆಡಿಎಸ್ ಜೊತೆ ಕೈಜೋಡಿಸಿ ಬಿಜೆಪಿ, ಬಿಬಿಎಂಪಿ ಗದ್ದುಗೆಗೇರಲು ಬಿಜೆಪಿಯ ಕೆಲ ನಾಯಕರು ಯತ್ನಿಸುತ್ತಿದ್ದು, ಇದು ಯಡಿಯೂರಪ್ಪನವರಿಗೆ ಇಷ್ಟವಿಲ್ಲವೆನ್ನಲಾಗಿದೆ. ಆದರೂ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಕೇಂದ್ರ ಸಚಿವ ಅನಂತ್ ಕುಮಾರ್ ಮೊದಲಾದವರು ಜೆಡಿಎಸ್ ಜೊತೆಗಿನ ಮೈತ್ರಿಗೆ ಉತ್ಸುಕವಾಗಿದ್ದು, ಈ ನಡುವೆ ಯಡಿಯೂರಪ್ಪನವರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.