ಬಿರು ಬಿಸಿಲಿಗೆ ತತ್ತರಿಸಿದ್ದ ದೇಶದ ಹಲವು ಭಾಗಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಮಳೆಯಾಗುತ್ತಿದೆ. ಸಿಡಿಲು ಗುಡುಗಿಗೆ ಹಲವು ಮಂದಿ ಬಲಿಯಾಗಿರುವ ಮಧ್ಯೆ ಎರಡು ಘೇಂಡಾ ಮೃಗಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಗೊರುಮಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವ ವೇಳೆ ಮೇ 18 ರಂದು ಈ ಘಟನೆ ಬೆಳಕಿಗೆ ಬಂದಿದೆ.
ಮೊದಲಿಗೆ ಇದು ಕಾಡುಗಳ್ಳರ ಕೃತ್ಯವೆಂದು ಭಾವಿಸಲಾಗಿತ್ತಾದರೂ ಮರಣೋತ್ತರ ಪರೀಕ್ಷೆ ವೇಳೆ ಒಂದು ಹೆಣ್ಣು ಘೇಂಡಾ ಮೃಗ ಹಾಗೂ ಒಂದು ಗಂಡು ಮರಿ ಘೇಂಡಾ ಮೃಗ ಸಿಡಿಲಿನ ಹೊಡೆತಕ್ಕೆ ಬಲಿಯಾಗಿರುವುದು ತಿಳಿದುಬಂದಿದೆ. ವಾಯುಭಾರ ಕುಸಿತದ ಪರಿಣಾಮ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಆಪಾರ ಹಾನಿ ಸಂಭವಿಸಿದೆ.