ಕೆಲ ಅಪರಿಚಿತ ವ್ಯಕ್ತಿಗಳು ಕೇಂದ್ರ ಸಚಿವರೊಬ್ಬರ ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾರೆ. ನವದೆಹಲಿಯಲ್ಲಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಖಾತೆ ಸಚಿವ ಜೆ.ಎಸ್.ಭಭೋರ್ ಅವರ ನಿವಾಸದಲ್ಲಿ ಈ ಕೃತ್ಯ ನಡೆದಿದೆ.
ಸೋಮವಾರ ಅಪರಿಚಿತ ವ್ಯಕ್ತಿಗಳ ತಂಡವೊಂದು ಸಚಿವರ ಮನೆಯ ಗ್ರಿಲ್ ಮುರಿದುಕೊಂಡು ಒಳಪ್ರವೇಶಿಸಿದೆ. ಆದ್ರೆ ದುಷ್ಕರ್ಮಿಗಳು ಯಾವುದೇ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಲ್ಲ. ತಮ್ಮ ಮೊಬೈಲ್ ಹಾಗೂ ಟ್ಯಾಬ್ಲೆಟ್ ಗಳು ನಾಪತ್ತೆಯಾಗಿವೆ ಅಂತಾ ಸಚಿವರ ಮನೆಯ ನೌಕರರು ಆರೋಪಿಸಿದ್ರು. ಆದ್ರೆ ಅವೆಲ್ಲವೂ ಬಳಿಕ ಮನೆಯೊಳಗಡೆ ಪತ್ತೆಯಾಗಿದೆ.
ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯದ ದುಷ್ಕರ್ಮಿಗಳು ಮನೆಯೊಳಗೆ ಪ್ರವೇಶಿಸಿದ್ದೇಕೆ ಅನ್ನೋದು ನಿಗೂಢವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಗಲೆಯಲ್ಲಿದ್ದ ಹಾಗೂ ಸುತ್ತಮುತ್ತಲು ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ.