ಹೊಸಪೇಟೆ: ಜೀವಂತ ಮಗುವನ್ನೇ ಸಮಾಧಿ ಮಾಡಲು ಹೊರಟಿದ್ದ ಹೊಸಪೇಟೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಯ ಸಂಬಂಧ ಅಣ್ಣ, ತಂಗಿಯನ್ನು ಬಂಧಿಸಲಾಗಿದೆ.
ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ಯುವತಿಗೆ ಮದುವೆ ನಿಶ್ಚಯವಾಗಿದ್ದು, ಮದುವೆಗೆ ಮೊದಲೇ ಭಾವಿ ಪತಿ ಮೃತಪಟ್ಟಿದ್ದಾನೆ. ಆಕೆ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದಾಳೆ. ಇದು ಆಕೆಯ ಸಹೋದರನಿಗೆ ಗೊತ್ತಾಗಿ ಹೊಸಪೇಟೆಯ ಆಸ್ಪತ್ರೆಗೆ ದಾಖಲಿಸಿ, ಹೆರಿಗೆ ಮಾಡಿಸಲಾಗಿದೆ. 6 ದಿನದ ಮಗುವನ್ನು ಆಟೋದಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಹೂತು ಹಾಕಲು ಮುಂದಾಗಿದ್ದಾರೆ.
ಸ್ಮಶಾನಕ್ಕೆ ಹೋಗುವ ಸಂದರ್ಭದಲ್ಲಿ ಮಗು ಅಳುವುದನ್ನು ಕೇಳಿದ ಆಟೋ ಚಾಲಕ ಹಾಗೂ ಆತನ ಸ್ನೇಹಿತರು, ಪ್ರಶ್ನಿಸಿದಾಗ, ಯುವತಿ ಹಾಗೂ ಆಕೆಯ ಅಣ್ಣ ಪರಾರಿಯಾಗಿದ್ದಾರೆ.
ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ವಹಿಸಲಾಗಿದ್ದು, ಆರೋಗ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡ ಹೊಸಪೇಟೆ ಠಾಣೆ ಪೊಲೀಸರು ತನಿಖೆ ನಡೆಸಿ, ಮದುವೆಗೆ ಮೊದಲೇ ಮಗು ಹೆತ್ತು ಅದನ್ನು ಕೊಲ್ಲಲು ಯತ್ನಿಸಿದ ಯುವತಿ ಹಾಗೂ ಆಕೆಗೆ ಸಾಥ್ ನೀಡಿದ ಸಹೋದರನನ್ನು ಬಂಧಿಸಿದ್ದಾರೆ.
ಮಗು ಜೀವಂತವಾಗಿದ್ದರೆ, ಅಕ್ರಮ ಸಂಬಂಧದಿಂದ ಮದುವೆಗೆ ಮೊದಲೇ ಮಗುವಾಗಿದೆ ಎಂಬ ಸಂಗತಿ ಬಯಲಾಗುತ್ತದೆ ಎಂಬ ಕಾರಣದಿಂದ ಸ್ಮಶಾನಕ್ಕೆ ಕೊಂಡೊಯ್ದು ಜೀವಂತ ಹೂಳಲು ಯತ್ನಿಸಿದ್ದಾಗಿ ಆರೋಪಿಗಳು ವಿಚಾರಣೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.