ವಾರಂಗಲ್ ಪಟ್ಟಣದ ಜಂಗೌನ್ ನಲ್ಲಿ ಕೌತುಕವೊಂದು ಸೃಷ್ಟಿಯಾಗಿದೆ. ಅಣಬೆಯೊಂದರಲ್ಲಿ ಗಣೇಶನ ಆಕೃತಿ ಮೂಡಿಬಂದಿದೆ. ಗಣೇಶ ಚೌತಿ ಸಂದರ್ಭದಲ್ಲೇ ಅಣಬೆ ಗಣಪ ಕಾಣಿಸಿಕೊಂಡಿರೋದ್ರಿಂದ ಭಕ್ತರು ತಂಡೋಪತಂಡವಾಗಿ ದರ್ಶನ ಪಡೆಯಲು ಬರ್ತಿದ್ದಾರೆ.
ಜಂಗೌನ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿರುವ ಮರದ ಕೆಳಗಡೆ ಎದ್ದಿರುವ ಅಣಬೆ ಥೇಟ್ ಅಣಬೆಯ ಆಕಾರದಲ್ಲಿದೆ. ಅಣಬೆ ಗಣಪನಿಗೆ ಈಗ ನಿತ್ಯವೂ ಪೂಜೆ ಸಲ್ಲುತ್ತಿದೆ. ಸುತ್ತಮುತ್ತಲ ಹಳ್ಳಿಯ ಜನರೆಲ್ಲ ಅಣಬೆ ಗಣಪನನ್ನು ನೋಡಲು ಬರ್ತಿದ್ದಾರೆ. ಕೆಲವರು ಅದೇ ಸ್ಥಳದಲ್ಲಿ ಗಣಪತಿ ದೇವಾಲಯ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಮೇಲಿನಿಂದ ನೋಡಿದ್ರೆ ಈ ಅಣಬೆಯ ಆಕಾರ ಆನೆಯ ಸೊಂಡಿಲನ್ನು ಹೋಲುತ್ತಿದೆ. ದೊಡ್ಡದಾದ ಕಿವಿಗಳಂತೆ ಅಣಬೆ ಅರಳಿದೆ.
ಇದೊಂದು ವಿಸ್ಮಯ ಅಂತಲೇ ಗ್ರಾಮಸ್ಥರು ಬಣ್ಣಿಸುತ್ತಿದ್ದಾರೆ. ಸ್ಥಳೀಯ ರಾಜಕಾರಣಿಗಳು ಇದನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತ್ಯೇಕ ಜಂಗೌನ್ ಜಿಲ್ಲೆಗಾಗಿ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆಯುತ್ತಿದ್ದು, ಗಣೇಶ ಕೂಡ ತಮ್ಮನ್ನು ಬೆಂಬಲಿಸಲು ಮೂಡಿ ಬಂದಿದ್ದಾನೆಂದು ವಾದಿಸುತ್ತಿದ್ದಾರೆ.