ಜಾರ್ಖಂಡ್ ನ ರಾಂಚಿ ಬಳಿಯ ಪುಟ್ಟ ಗ್ರಾಮವೊಂದರ ಬಾಲಕಿಯರು ತಮ್ಮ ಊರಿನ ಹೆಸರು ವಿಶ್ವ ಭೂಪಟದಲ್ಲಿ ಕಾಣಿಸಬೇಕೆಂಬ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿಯೇ ಆಪಾರ ಸಾಧನೆಯನ್ನೂ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೇನು ಅಂತೀರಾ ಈ ಸ್ಟೋರಿ ಓದಿ.
ಜಾರ್ಖಂಡ್ ನ ಅತ್ಯಂತ ಹಿಂದುಳಿದ ಗ್ರಾಮ ಉಟಪ್ ನ ಬಾಲಕಿಯರು ಫುಟ್ಬಾಲ್ ನಲ್ಲಿ ಇಂದು ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. 2013 ರಲ್ಲಿ ಸ್ಪೇನ್ ನಲ್ಲಿ ನಡೆದ ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡಿದ್ದ ಈ ಗ್ರಾಮದ ಬಾಲಕಿಯರು ಪದಕವನ್ನೂ ಗಳಿಸಿದ್ದಾರೆ. ಅಮೆರಿಕಾದಲ್ಲಿ ನಡೆದ ಹಲವು ಪಂದ್ಯಗಳಲ್ಲೂ ಭಾಗವಹಿಸಿದ್ದಾರೆ.
ಇದಕ್ಕೆಲ್ಲಾ ಕಾರಣವಾಗಿರುವುದು ‘ಯುವ’ ಎಂಬ ಎನ್.ಜಿ.ಓ. ಸಂಸ್ಥೆ. 2008 ರಲ್ಲಿ ಅಮೆರಿಕಾದ ಫ್ರಾನ್ಜ್ ಗಸ್ಟಲರ್ ಎಂಬವರು ‘ಯುವ’ ಎನ್.ಜಿ.ಓ. ಸಂಸ್ಥೆಗೆ ಬಂದಿದ್ದರು. ಈ ವೇಳೆ ಉಟಪ್ ಗ್ರಾಮದ ಬಾಲಕಿಯರ ಫುಟ್ಬಾಲ್ ಪ್ರೀತಿಯನ್ನು ಕಂಡು ಅವರಿಗೆ ನೆರವು ನೀಡಬೇಕೆಂದು ಮನಸ್ಸು ಮಾಡಿದರಲ್ಲದೇ ಇದಕ್ಕಾಗಿ ಅಲ್ಲಿಯೇ ನೆಲೆ ನಿಂತರು.
ಇದೆಲ್ಲದರ ಫಲವಾಗಿ ಇಂದು ಉಟಪ್ ಬಾಲೆಯರು ಅಂತರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ‘ಯುವ’ ಸಂಸ್ಥೆ ಈ ಗ್ರಾಮದ ಬಾಲಕಿಯರಿಗೆ ಕೇವಲ ಫುಟ್ಬಾಲ್ ತರಬೇತಿ ಮಾತ್ರವಲ್ಲ. ಕಂಪ್ಯೂಟರ್, ಇಂಗ್ಲೀಷ್ ಹಾಗೂ ಗಣಿತದ ಶಿಕ್ಷಣವನ್ನು ನೀಡುತ್ತಿದೆ. ಇದನ್ನು ಸಾರ್ಥಕಪಡಿಸಿಕೊಳ್ಳುತ್ತಿರುವ ಗ್ರಾಮದ ಬಾಲಕಿಯರು ಮುಂದೊಂದು ದಿನ ತಮ್ಮ ಗ್ರಾಮ ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳುವುದೆಂಬ ವಿಶ್ವಾಸ ಹೊಂದಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಈ ಬಾಲಕಿಯರನ್ನು ಭೇಟಿ ಮಾಡಿ ವಿಶ್ವಾಸ ತುಂಬಿದ್ದಾರೆ.