ಕಾನ್ಪುರ್: ಸಾಲದಿಂದ ಸಂಕಷ್ಟದಲ್ಲಿದ್ದ ದಂಪತಿ, ಕರುಳ ಕುಡಿಯನ್ನೇ ಮಾರಾಟ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಬಾಬುಪುರ್ವಾ ನಿವಾಸಿ 40 ವರ್ಷದ ಖಾಲಿದ್, 35 ವರ್ಷದ ಸಯಿದಾ ದಂಪತಿ, ಮಗು ಮಾರಾಟ ಮಾಡಿದವರು.
ಖಾಲಿದ್ ಟೀ ಅಂಗಡಿ ನಡೆಸುತ್ತಿದ್ದು, ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಜೀವನ ನಿರ್ವಹಣೆಗಾಗಿ ಈ ದಂಪತಿ ಸುಮಾರು 50,000 ರೂ. ಖಾಸಗಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲ ಕೊಟ್ಟವರು ಹಣ ವಾಪಸ್ ಕೊಡುವಂತೆ ಪೀಡಿಸಿದ್ದು, ಇದರಿಂದ ದಿಕ್ಕು ತೋಚದೇ 5 ತಿಂಗಳ ಗಂಡು ಮಗು ಫೈರೋಜ್ ನನ್ನು 1.6 ಲಕ್ಷ ರೂಪಾಯಿಗೆ ಹರೂನ್ ಎಂಬುವವರಿಗೆ ಮಾರಾಟ ಮಾಡಿದ್ದಾರೆ.
ಮಗು ನಾಪತ್ತೆಯಾಗಿರುವ ಬಗ್ಗೆ ಅಕ್ಕಪಕ್ಕದವರು ವಿಚಾರಿಸಿದಾಗ, ಕಾಣೆಯಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದಾರೆ.
ಕೊನೆಗೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿದಾಗ, ಅಸಲಿ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು, ಆರೋಪಿತರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.