ಇವರು ನಮ್ಮ ಶಿಕ್ಷಣ ಸಚಿವರಾಗಲು ಅರ್ಹ ವ್ಯಕ್ತಿ. ಯಾಕಂದ್ರೆ ಪ್ರೊಫೆಸರ್ ವಿ.ಎಸ್. ಪಾರ್ಥಿಬನ್ ಅವರ ಶೈಕ್ಷಣಿಕ ಹಿನ್ನೆಲೆಯೇ ಅಷ್ಟು ಅದ್ಭುತವಾಗಿದೆ.
ಚೆನ್ನೈನ ಈ ಪ್ರಾಧ್ಯಾಪಕರು ಪದವಿಗಳ ಶಿಖರವನ್ನೇ ಏರಿದ್ದಾರೆ. 30 ವರ್ಷಗಳಲ್ಲಿ ಪಾರ್ಥಿಬನ್ 145 ಶೈಕ್ಷಣಿಕ ಪದವಿಗಳನ್ನು ಸಂಪಾದಿಸಿದ್ದಾರೆ. ಓದೋದು ಪಾರ್ಥಿಬನ್ ಅವರ ನೆಚ್ಚಿನ ಹವ್ಯಾಸ. ಹೊಸ ಹೊಸ ಪದವಿಗೆ, ಡಿಪ್ಲೊಮಾ ಕೋರ್ಸ್ ಗಳಿಗೆ ಅವರು ಅರ್ಜಿ ಹಾಕುತ್ತಲೇ ಇದ್ರು. ಪರೀಕ್ಷೆಗೂ ತಯಾರಿ ನಡೆಸುತ್ತಿದ್ರು.
ಹೀಗೆ ಮಾಡ್ತಾ ಮಾಡ್ತಾ 30 ವರ್ಷಗಳಲ್ಲಿ 145 ಪದವಿ ಗಳಿಸಿದ್ದಾರೆ. ಆದ್ರೆ ಕಾಲೇಜಿನಲ್ಲಿ ಮೊದಲ ಬಾರಿ ಪದವಿ ಪಾಸ್ ಮಾಡಲು ಅವರಿಗೆ ಕಷ್ಟವಾಗಿತ್ತು. ಕಾರಣ ಎಕ್ಸಾಂ ದಿನ ಪರೀಕ್ಷೆ ಇರುವ ವಿಷಯ ಬಿಟ್ಟು ಬೇರೆ ವಿಷಯವನ್ನು ಪಾರ್ಥಿಬನ್ ಓದಿಕೊಂಡು ಹೋಗಿದ್ದರಂತೆ. ಮಲ್ಟಿಪಲ್ ಚಾಯ್ಸ್ ಇದ್ದಿದ್ರಿಂದ ಹೇಗೋ ಉತ್ತೀರ್ಣನಾಗಿ ಕಾನೂನು ಇಲಾಖೆಯಲ್ಲಿ ಕೆಲಸ ಹಿಡಿದೆ ಎನ್ನುತ್ತಾರೆ ಅವರು.
ಪಾರ್ಥಿಬನ್ ಅವರಿಗೆ ಅಷ್ಟಾಗಿ ಆಗಿಬರದ ವಿಷಯ ಅಂದ್ರೆ ಗಣಿತ. ಇಷ್ಟೆಲ್ಲಾ ಡಿಗ್ರಿ ಸಂಪಾದಿಸಿದ್ದಾರೆ ಅಂದ್ರೆ ಅವರಿಗೆ ನೆನಪಿನ ಶಕ್ತಿ ಚೆನ್ನಾಗಿರಬೇಕು ಅಂದ್ಕೋಬೇಡಿ. ಪ್ರತಿನಿತ್ಯ ಅವರು ಭೇಟಿ ಕೊಡುವ ಜಾಗ, ಜನರ ಮುಖಗಳು, ಮಾರ್ಗ ಎಲ್ಲವೂ ಪಾರ್ಥಿಬನ್ ಗೆ ಮರೆತು ಹೋಗುತ್ತಂತೆ. ಆದ್ರೂ ಓದುವ ಹಂಬಲ ಮತ್ತು ಛಲದಿಂದ 145 ಪದವಿಗಳನ್ನು ಸಂಪಾದಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.