ಮುಂಬೈ: ವಿಶ್ವದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ, ಇಂಟರ್ನೆಟ್, ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಹೀಗೆ ಜಾಲತಾಣ ವಾಟ್ಸಾಪ್ ಗ್ರೂಪ್ ನಲ್ಲಿ ಆರಂಭವಾದ ವಾಕ್ಸಮರ, ಅನಾಹುತಕ್ಕೆ ಕಾರಣವಾದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ದಾದಾರ್ ಮೂಲದ ವ್ಯಾಪಾರಿಯೊಬ್ಬರ ಪುತ್ರ 26 ವರ್ಷದ ಮನೀಶ್ ಶಾ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ 21 ವರ್ಷದ ಶ್ರೇಯಸ್ ನವಲ್ಕರ್ ಬಾಂಡ್ ಹೆಸರಿನ ವಾಟ್ಸಾಪ್ ಗ್ರೂಪ್ ನಲ್ಲಿ ಸ್ನೇಹಿತರಾಗಿದ್ದರು. ಇವರಿಬ್ಬರ ನಡುವೆ ಹಲವು ವಿಚಾರಗಳ ಕುರಿತಾಗಿ ಪರ, ವಿರೋಧ ಚರ್ಚೆ ನಡೆಯುತ್ತಿತ್ತು.
ಗುಂಪಿನಲ್ಲಿ ಚರ್ಚೆ ವಿಕೋಪಕ್ಕೆ ತಿರುಗಿ ಮನೀಶ್ ಶಾ ಗ್ರೂಪ್ ನಿಂದ ಹೊರಗೆ ಬಂದಿದ್ದಾನೆ. ಆದರೂ, ಶ್ರೇಯಸ್ ಫೋನ್ ಮಾಡಿ ಗೇಲಿ ಮಾಡಿದ್ದಾನೆ. ಗ್ರಾಂಟ್ ರಸ್ತೆಯ ನಾಜಾ ಸಿನಿಮಾ ಕಾಂಪೌಂಡ್ ಬಳಿ ಇಬ್ಬರಿಗೂ ಜಗಳವಾಗಿದ್ದು, ಮನೀಶ್ ಸಿಟ್ಟಿನಿಂದ ಶ್ರೇಯಸ್ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಶ್ರೇಯಸ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ಮನೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.