ಬೆಂಗಳೂರು: ಬಹು ನಿರೀಕ್ಷೆಯ ನಿಗಮ, ಮಂಡಳಿ ನೇಮಕಾತಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗದ ಹಿನ್ನಲೆಯಲ್ಲಿ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಆದರೆ, ನಾಳೆ ಸಂಜೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ.
ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿದ್ದು, ಸೆಪ್ಟಂಬರ್ 5 ರಂದು ಸಂಜೆ 4.30 ಕ್ಕೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಬೆಂಗಳೂರು ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ವಸತಿ ಸಚಿವ ಅಂಬರೀಶ್ ಅವರ ಬದಲಿಗೆ ಅದೇ ಸಮುದಾಯಕ್ಕೆ ಸೇರಿದ ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.
ಕೃಷ್ಣಪ್ಪ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಖಾತೆ ಸಚಿವರಾದ ಎ.ಮಂಜು ಮತ್ತು ವಿನಯ್ ಕುಲಕರ್ಣಿ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ನೀಡಲಾಗುವುದು ಎನ್ನಲಾಗಿದೆ.