ನವದೆಹಲಿ: ಚಾಂಪಿಯನ್ಸ್ ಟ್ರೋಫಿ, 2017 ರ ಜೂನ್ 1 ರಿಂದ 18 ರವರೆಗೆ ಇಂಗ್ಲೆಂಡ್ ನಲ್ಲಿ ನಡೆಯಲಿದ್ದು, ಇದಕ್ಕಾಗಿ ಐ.ಸಿ.ಸಿ. ಯಿಂದ ಬರೋಬ್ಬರಿ 898 ಕೋಟಿ ರೂ. ಅನುದಾನ ನೀಡಲಾಗಿದೆ.
ಆತಿಥ್ಯ ವಹಿಸಿಕೊಳ್ಳಲಿರುವ ಇಂಗ್ಲೆಂಡ್ ಗೆ 898 ಕೋಟಿ ರೂ. ನೀಡುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐ.ಸಿ.ಸಿ) ತೀರ್ಮಾನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ಮಾರ್ಚ್ 8 ರಿಂದ ಏಪ್ರಿಲ್ 3 ರ ವರೆಗೆ ಭಾರತದಲ್ಲಿ ನಡೆದ ಐ.ಸಿ.ಸಿ. ಟಿ-20 ವಿಶ್ವಕಪ್ ಆತಿಥ್ಯಕ್ಕೆ ನೀಡಿದ್ದಕ್ಕಿಂತ 3 ಪಟ್ಟು ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿರುವುದು ಬಿ.ಸಿ.ಸಿ.ಐ. ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತದಲ್ಲಿ ನಡೆದ ವಿಶ್ವಕಪ್ ಟಿ-20 ಪಂದ್ಯಾವಳಿಗೆ ಐ.ಸಿ.ಸಿ. 299 ಕೋಟಿ ರೂ. ನೀಡಿದ್ದು, 27 ದಿನ ಮಹಿಳಾ, ಪುರುಷರ ಟಿ-20 ವಿಭಾಗದಲ್ಲಿ 58 ಪಂದ್ಯ ನಡೆಸಲಾಗಿತ್ತು. ಈಗ 19 ದಿನ ನಡೆಯುವ 15 ಪಂದ್ಯಗಳಿಗೆ 898 ಕೋಟಿ ರೂ ನೀಡಿರುವುದು ಬಿ.ಸಿ.ಸಿ.ಐ. ಅಸಮಾಧಾನಕ್ಕೆ ಕಾರಣವಾಗಿದೆ.