ಮಹಾರಾಷ್ಟ್ರದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರ ಪರಿಸ್ಥಿತಿ ಆವರಿಸಿತ್ತು. ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು. ಅದರಲ್ಲೂ ವಿದರ್ಭ, ಮರಾಠವಾಡ ಪ್ರಾಂತ್ಯಗಳಲ್ಲಿ ಭೀಕರ ಪರಿಸ್ಥಿತಿ ತಲೆದೋರಿತ್ತು.
ಜನರ ಬವಣೆಯನ್ನು ನೀಗಿಸಲು ಮುಂದಾಗಿದ್ದ ಸರ್ಕಾರ, ರೈಲಿನ ಮೂಲಕ ಪ್ರತಿ ನಿತ್ಯ ಲಕ್ಷಾಂತರ ಲೀಟರ್ ನೀರನ್ನು ತರಿಸುವ ಮೂಲಕ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿತ್ತು. ಇದೀಗ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸಿದ್ದು, ಜನತೆಗೆ ನೀರು ಲಭ್ಯವಾಗುವಂತೆ ಮಾಡಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಮೂವರು ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ತೋರಿದ ನಿರ್ಲಕ್ಷ್ಯಕ್ಕೆ ಈಗ ತಕ್ಕ ಬೆಲೆ ತೆತ್ತಿದ್ದಾರೆ. ಆಗಸ್ಟ್ 21 ರಂದು ಲಾತೂರ್ ಮುನ್ಸಿಪಲ್ ಕಾರ್ಪೊರೇಷನ್ ನ ನೀರು ನಿರ್ವಹಣಾ ಘಟಕದ ಸಿಬ್ಬಂದಿ, ನಗರದ ಆರು ವಾಟರ್ ಟ್ಯಾಂಕ್ ಗಳಿಗೆ ನೀರು ತುಂಬಿಸುವ ವೇಳೆ ಗಮನಿಸದ ಕಾರಣ ವಾಟರ್ ಟ್ಯಾಂಕ್ ತುಂಬಿ ಸುಮಾರು 20 ನಿಮಿಷಗಳ ಕಾಲ 1.5 ಲಕ್ಷ ಲೀಟರ್ ನೀರು ಪೋಲು ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ನಿರ್ಲಕ್ಷ್ಯ ವರ್ತನೆ ತೋರಿದ ಮೂವರು ಸಿಬ್ಬಂದಿಗೆ ವೇತನ ಹೆಚ್ಚಳವನ್ನು ತಡೆ ಹಿಡಿಯುವ ಮೂಲಕ ಪಾಠ ಕಲಿಸಲಾಗಿದೆ.