ಸುಪ್ರೀಂ ಕೋರ್ಟ್ ಆದೇಶದಂತೆ ದ್ವಿಚಕ್ರವಾಹನ ಚಾಲನೆ ಮಾಡುವವರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ. ಆದರೂ, ಕೆಲವರು ಹೇರ್ ಸ್ಟೈಲ್ ಹಾಳಾಗುತ್ತದೆ ಎಂದು ಹೆಲ್ಮೆಟ್ ಹಾಕುವುದೇ ಇಲ್ಲ.
ಮುಂಬೈನಲ್ಲಿ ಕೇರ್ವಾಡಿ ಪೊಲೀಸರು ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇನಲ್ಲಿ ನಾಕಾಬಂಧಿ ಹಾಕಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದ ಸುಮಾರು 13 ಮಂದಿ ಬೈಕ್ ಸವಾರರು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದು, ಅವರಿಗೆ ದಂಡ ವಿಧಿಸಲಾಗಿದೆ. ಇವರಲ್ಲಿ ಕೆಲವರು, ಹೇರ್ ಸ್ಟೈಲ್ ಹಾಳಾಗುತ್ತದೆ ಎಂದು ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದಾರೆನ್ನಲಾಗಿದೆ. ಕೆಲವರಂತೂ ತಮ್ಮ ‘ಫಂಕಿ ಹೇರ್ ಸ್ಟೈಲ್’ ಹಾಳಾಗುತ್ತೆ ಎಂದು ಹೆಲ್ಮೆಟ್ ಹಾಕಿಲ್ಲ ಎಂದಿದ್ದಾರೆ.
ಅಂತಹ ಐದಾರು ಮಂದಿ ಯುವಕರನ್ನು ಠಾಣೆಗೆ ಕರೆದುಕೊಂಡ ಬಂದ ಪೊಲೀಸರು, ಅಲ್ಲಿಗೇ ಕಟಿಂಗ್ ಮಾಡುವವರನ್ನು ಕರೆಸಿ, ಹೇರ್ ಕಟ್ ಮಾಡಿಸಿದ್ದಾರೆ. ಕುರ್ಲಾ ಮೂಲದ 20 ವರ್ಷದ ಯುವಕ ಡ್ಯಾನಿಷ್ ಶೇಖ್ ಎಂಬ ಹೋಟೆಲ್ ಮ್ಯಾನೇಜ್ ಮೆಂಟ್ ಸ್ಟೂಡೆಂಟ್ ಗೂ ಹೇರ್ ಕಟ್ ಮಾಡಲಾಗಿದೆ.
ಆತ, 3,500 ರೂಪಾಯಿ ಕೊಟ್ಟು ಎರಡು ವಾರಗಳ ಹಿಂದಷ್ಟೇ ಹೇರ್ ಕಟಿಂಗ್ ಮಾಡಿಸಿದ್ದೇನೆ. ಪೊಲೀಸರು ಅದನ್ನು ಹಾಳು ಮಾಡಿದ್ದಾರೆ ಎಂದು ದೂರಿದ್ದಾನೆ. ಹೀಗೆ ಹೆಲ್ಮೆಟ್ ಹಾಕದೇ ಯರ್ರಾಬಿರ್ರಿ ಬೈಕ್ ಓಡಿಸಿದವರಿಗೆ ಹೇರ್ ಕಟ್ ಮಾಡಿಸುವ ಮೂಲಕ ಮುಂಬೈ ಕೇರ್ವಾಡಿ ಪೊಲೀಸರು ಗಮನ ಸೆಳೆದಿದ್ದಾರೆ.