ಬಳ್ಳಾರಿ: ತೈಲ ಟ್ಯಾಂಕರ್ ಪಲ್ಟಿಯಾಗಿ ಅಪಾರ ಪ್ರಮಾಣದ ಡೀಸೆಲ್ ಸೋರಿಕೆಯಾದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಇದೇ ಸಂದರ್ಭದಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಬಳ್ಳಾರಿ ಸಮೀಪದ ಹಲಕುಂದಿ ಗ್ರಾಮದ ಬಳಿ ರೈಲ್ವೇ ಟ್ರ್ಯಾಕ್ ಸಮೀಪ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು, ಇದರಿಂದಾಗಿ ಟ್ಯಾಂಕರ್ ನಲ್ಲಿದ್ದ ಡೀಸೆಲ್ ಸೋರಿಕೆಯಾಗಿದೆ. ಸುದ್ದಿ ತಿಳಿಯುತ್ತಲೇ, ಕೊಡ, ಬಕೆಟ್, ಕ್ಯಾನ್ ಕೈಯಲ್ಲಿಡಿದುಕೊಂಡು ಬಂದ ಜನ, ಚೆಲ್ಲಿದ್ದ ಡೀಸೆಲ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ. ಆದರೂ, ಜನ ಕೆಳಗೆ ಬೀಳುತ್ತಿದ್ದ ಡೀಸೆಲ್ ತುಂಬಿಸಿಕೊಳ್ಳಲು ಮುಂದಾದಾಗ ಗದರಿಸಿ ಕಳಿಸಿದ್ದಾರೆ ಎನ್ನಲಾಗಿದೆ.
ತೈಲ ಟ್ಯಾಂಕರ್ ಪಲ್ಟಿಯಾದ ಪರಿಣಾಮ, ಬಳ್ಳಾರಿ-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ನಂತರ ಕ್ರೇನ್ ಮೂಲಕ ಟ್ಯಾಂಕರ್ ಎತ್ತಲಾಗಿದ್ದು, ಸಂಚಾರ ವ್ಯವಸ್ಥೆ ಸರಿಯಾಗಿದೆ.