ಶಿವಮೊಗ್ಗ: ಟ್ಯಾಂಕರ್ ಪಲ್ಟಿಯಾಗಿ 20,000 ಲೀಟರ್ ಹಾಲು, ನೀರು ಪಾಲಾದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮೇಲಿನ ಬೆಸಿಗೆ ಗ್ರಾಮದ ಸಮೀಪ ನಡೆದಿದೆ.
ಮೇಲಿನ ಬೆಸಿಗೆ ಸಮೀಪ ಶರಾವತಿ ನದಿ ಸೇತುವೆ ತಿರುವಿನಲ್ಲಿ, ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಲ್ಟಿಯಾಗಿದ್ದು, ಇದರಿಂದ ಟ್ಯಾಂಕರ್ ನಲ್ಲಿದ್ದ ಹಾಲೆಲ್ಲಾ ಚೆಲ್ಲಿದೆ. ಮಹಾರಾಷ್ಟ್ರದ ಕೃಷ್ಣ ಡೇರಿಗೆ ಸೇರಿದ ಹಾಲಿನ ಟ್ಯಾಂಕರ್ ಇದಾಗಿದ್ದು. ಸುತ್ತಲಿನ ಪ್ರದೇಶಗಳಿಂದ ಹಾಲನ್ನು ಸಂಗ್ರಹಿಸಿ ಮಂಗಳೂರಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಪಲ್ಟಿಯಾಗಿ ಹಾಲು ಚೆಲ್ಲಿದೆ. ಈ ಸಂದರ್ಭದಲ್ಲಿ ಜನ ಬಕೆಟ್, ಕೊಡಗಳಲ್ಲಿ ಹಾಲನ್ನು ತೆಗೆದುಕೊಂಡು ಹೋಗಿದ್ದಾರೆ.
ಹೀಗೆ ತೆಗೆದುಕೊಂಡು ಹೋಗುವ ಧಾವಂತದಲ್ಲಿ ಟ್ಯಾಂಕರ್ ದಾಖಲೆಗಳನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ. ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಹೊಸನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.