ಆಕೆಗೆ 21ರ ಹರೆಯ, ಬಾಯ್ ಫ್ರೆಂಡ್ ಸಹವಾಸಕ್ಕೆ ಬಿದ್ದು ಗರ್ಭಿಣಿಯೂ ಆಗಿದ್ಲು. ಈ ವಿಚಾರವನ್ನು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಕೊನೆಗೆ ಶೌಚಾಲಯದಲ್ಲೇ ಆಕೆಗೆ ಹೆರಿಗೆ ಆಗ್ಬಿಟ್ಟಿದೆ. ಕೂಡಲೇ ನವಜಾತ ಶಿಶುವನ್ನು ಅಲ್ಲೇ ಇದ್ದ ಕಸದ ಬುಟ್ಟಿಗೆ ಎಸೆದು ಹೋಗಿದ್ದ ವಿದ್ಯಾರ್ಥಿನಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಈ ಘಟನೆ ನಡೆದಿದ್ದು ಅಮೆರಿಕದಲ್ಲಿ. ನ್ಯೂ ಕೊನ್ ಕೋರ್ಡ್ ನಲ್ಲಿರುವ ಮಸ್ಕಿಂಗಮ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಯುವತಿ ಎಮಿಲೆ ವೀವರ್ ಈ ಕೃತ್ಯ ಎಸಗಿದ್ದಾಳೆ. ಹೆರಿಗೆ ನೋವು ಶುರುವಾಗ್ತಿದ್ದಂತೆ ಯೂನಿವರ್ಸಿಟಿಯ ಶೌಚಾಲಯಕ್ಕೆ ಓಡಿ ಹೋಗಿದ್ದಾಳೆ, ಹೆರಿಗೆ ಬಳಿಕ ಹೊಕ್ಕುಳ ಬಳ್ಳಿಯನ್ನು ಚಾಕುವಿನಿಂದ ಕತ್ತರಿಸಿದ್ದಾಳೆ. ಮಗುವನ್ನು ಬಿಸಾಕಿ ಬಂದ ಎಮಿಲೆ ತನಗೆ ಗರ್ಭಪಾತವಾಗಿದೆ ಅಂತಾ ಸ್ನೇಹಿತರ ಬಳಿ ಹೇಳಿಕೊಂಡಿದ್ದಳು. ಆಸ್ಪತ್ರೆಗೆ ದಾಖಲಾದ ಮೇಲೂ ಸುಳ್ಳುಗಳ ಸರಮಾಲೆ ಮುಂದುವರಿಸಿದ್ದಳು.
ತನ್ನ ಹೊಟ್ಟೆಯಲ್ಲಿ ಮಗು ಇರಲಿಲ್ಲ, 4 ಇಂಚು ಉದ್ದದ ಟಿಶ್ಯೂ ಇತ್ತು ಅಂತಾ ಕಥೆ ಕಟ್ಟಿದ್ದಾಳೆ. ಆದ್ರೆ ವೈದ್ಯರು ಇದನ್ನು ನಂಬಲಿಲ್ಲ. ಬಂಧನಕ್ಕೊಳಗಾದ ಮೇಲೆ ಪೊಲೀಸರ ಬಳಿ ಕೂಡ ಎಮಿಲೆ ಸುಳ್ಳು ಹೇಳಿದ್ದಾಳೆ. ಮಗು ಜನಿಸಿದ ಮೇಲೆ ಅದನ್ನು ನೆಲದ ಮೇಲೆ ಬಿಟ್ಟೆ, ಆದ್ರೆ ಅಷ್ಟರಲ್ಲಾಗ್ಲೇ ಅದು ಸತ್ತು ಹೋಗಿತ್ತು. ಹಾಗಾಗಿ ಕಸದ ಬುಟ್ಟಿಯಲ್ಲಿ ಎಸೆದು ಬಂದೆ ಎಂದಿದ್ದಾಳೆ. ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರು ಎಮಿಲೆ ಹೇಳಿದ್ದೆಲ್ಲ ಸುಳ್ಳು ಅಂತಾ ದೃಢಪಡಿಸಿಕೊಂಡಿದ್ದಾರೆ. ಬಂಧನಕ್ಕೊಳಗಾಗಿದ್ದ ಆಕೆ, ಇದೀಗ 50,000 ಡಾಲರ್ ಬಾಂಡ್ ಆಧಾರದ ಮೇಲೆ ಜಾಮೀನಿನ ಮೇಲೆ ಹೊರ ಬಂದಿದ್ದಾಳೆ.