ರಾತ್ರಿ 10 ಗಂಟೆ ಸಮಯ, ದೆಹಲಿ ಹೊರವಲಯದ 4-ಸ್ಟಾರ್ ಹೋಟೆಲ್ ಒಂದರ ಪಾರ್ಕಿಂಗ್ ಲಾಟ್ ಗೆ ಬಂದ ವ್ಯಕ್ತಿಯೊಬ್ಬ ಅಲ್ಲಿದ್ದ ಆಡಿ ಕ್ಯೂ 7 ಕಾರು ತೆಗದುಕೊಂಡು ಹೊರಟೇ ಹೋದ.
ಅರೆ ಅದ್ರಲ್ಲೇನಿದೆ ವಿಶೇಷ ಅಂದ್ಕೋಬೇಡಿ, ಅಸಲಿಗೆ ಆ ಕಾರು ಅವನದ್ದಲ್ಲ. ಹಾಲಿಡೇ ಇನ್ ಹೋಟೆಲ್ ನಿಂದ ಕಳವಾದ ಆಡಿ ಕಾರು ಉದ್ಯಮಿ ಅರ್ಜುನ್ ಗರ್ಗ್ ಅವರಿಗೆ ಸೇರಿದ್ದು. ಕುಟುಂಬದವರೊಂದಿಗೆ ರಾತ್ರಿ 8.30ರ ಸುಮಾರು ಅರ್ಜುನ್, ಹೋಟೆಲ್ ಗೆ ಬಂದಿದ್ರು.10.15ರ ವೇಳೆಗೆ ಊಟ ಮಾಡಿ ಹೊರಟಿದ್ದಾರೆ. ಆದ್ರೆ ಸೆಕ್ಯೂರಿಟಿ ಬಳಿ ಕೊಟ್ಟಿದ್ದ ಕಾರ್ ಕೀ ನಾಪತ್ತೆಯಾಗಿತ್ತು.
ಕೀ ಇಲ್ಲದಿದ್ರೇನಂತೆ ಕಾರ್ ಇದ್ಯಲ್ಲ ಅಂದ್ಕೊಂಡು ಬಂದವರಿಗೆ ಶಾಕ್. 2 ಗಂಟೆಗಳ ಬಳಿಕ ನಿಮ್ಮ ಕಾರು ಕಳ್ಳತನವಾಗಿದೆ ಅಂತಾ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ರು ಅನ್ನೋದು ಅರ್ಜುನ್ ಪತ್ನಿ ಸುಪ್ರಿಯಾ ಅವರ ಆರೋಪ. ಸಿಸಿ ಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಮೊಬೈಲ್ ನಲ್ಲಿ ಮಾತನಾಡಿಕೊಂಡು ಆರಾಮಾಗಿ ಹೋಟೆಲ್ ಪ್ರವೇಶಿಸಿದ ವ್ಯಕ್ತಿಯೊಬ್ಬ 15 ನಿಮಿಷಗಳ ನಂತರ ಅಲ್ಲಿಂದ ಹೊರಟು ಸಲೀಸಾಗಿ ಕೀ ತೆಗೆದುಕೊಂಡು ಆಡಿ ಕಾರ್ ಓಡಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಕಾರ್ ಕಳುವಾದ ವಿಷಯವನ್ನು ತಮಗೆ ತಡವಾಗಿ ತಿಳಿಸಿದ್ರಿಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಅಂತಾ ಆಡಿ ಕಾರ್ ಮಾಲೀಕ ಅರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.