ಚೆನ್ನೈ: ಕರ್ನಾಟಕದಿಂದ ಕಾವೇರಿ ನದಿ ನೀರು ಬಿಡುಗಡೆಗೆ ಒತ್ತಾಯಿಸಿ, ಆಗಸ್ಟ್ 30 ರಂದು ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ. ರೈತರು, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.
ಕರ್ನಾಟಕದಿಂದ 50 ಟಿ.ಎಂ.ಸಿ. ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಕರ್ನಾಟಕದಲ್ಲಿ ಮಳೆ ಇಲ್ಲದೆ ಬರಗಾಲದ ಸ್ಥಿತಿ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಕಾರಣ, ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ನೀರಿಲ್ಲದೇ ತೊಂದರೆಯಾಗಿದೆ. ಕುಡಿಯುವ ನೀರಿಗೆ ಮಾತ್ರ ಇರುವ ನೀರನ್ನು ಬಳಸಿಕೊಳ್ಳಲು ಸರ್ಪಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಳೆ ಇಲ್ಲದ ಕಾರಣ, ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಕರ್ನಾಟಕದ ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಿದ್ದು, ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ. ಇದನ್ನು ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ದೃಷ್ಠಿಯಿಂದ ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ.
ಕಾವೇರಿ ನದಿಪಾತ್ರದ ಸುಮಾರು 7-8 ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ. ಅಲ್ಲದೇ ಎರಡೂ ರಾಜ್ಯಗಳಿಂದ ಬಸ್ ಸಂಚಾರ ಸ್ಥಗಿತಗೊಳ್ಳಬಹುದೆಂದು ಹೇಳಲಾಗಿದೆ.