ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ನದಿಗಳೆಲ್ಲಾ ಉಕ್ಕೇರಿ ಹರಿಯುತ್ತಿದ್ದು, ಅಪಾಯದ ಸ್ಥಿತಿ ಉಂಟಾಗಿದೆ. ಹೀಗೆ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕಿಯರನ್ನು 10 ವರ್ಷದ ಬಾಲಕನೊಬ್ಬ ಜೀವದ ಹಂಗು ತೊರೆದು ರಕ್ಷಿಸಿದ್ದಾನೆ.
ಬಿಹಾರದ ಜಹಾನಾಬಾದ್ ಜಿಲ್ಲೆಯ ಗೋಪಾಲಪುರಿ ಸಮೀಪದ ಜೀವಾ ಗ್ರಾಮದ ವಿಪಿನ್ ಸಾಹಸ ಮೆರೆದ ಬಾಲಕ. 12 ವರ್ಷ ವಯಸ್ಸಿನ 6 ಮಂದಿ ಬಾಲಕಿಯರು, ಶಾಲೆಗೆ ಹೋಗುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ಬಾಲಕ ವಿಪಿನ್, ಜೀವದ ಹಂಗು ತೊರೆದು ನದಿಗೆ ಧುಮುಕಿದ್ದಾನೆ. ಒಬ್ಬೊಬ್ಬರನ್ನೇ ದಡದ ಸಮೀಪಕ್ಕೆ ಎಳೆದು ತಂದಿದ್ದಾನೆ. ಆಗ ಗ್ರಾಮಸ್ಥರು ಅವರನ್ನು ರಕ್ಷಿಸಿದ್ದಾರೆ.
ನಾಲ್ವರು ಬಾಲಕಿಯರನ್ನು ವಿಪಿನ್ ರಕ್ಷಿಸಿದನಾದರೂ, ಮತ್ತಿಬ್ಬರು ಬಾಲಕಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪ್ರಾಣದ ಹಂಗು ತೊರೆದು ನಾಲ್ವರನ್ನು ಕಾಪಾಡಿದ ವಿಪಿನ್ ಸಾಹಸವನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.