ಹುಬ್ಬಳ್ಳಿ: ಬೆಂಗಳೂರಿನಿಂದ ಆಗಸ್ಟ್ 24 ರಂದು ನಿಗೂಢವಾಗಿ ನಾಪತ್ತೆಯಾಗಿದ್ದ 13 ವರ್ಷದ ವಿದ್ಯಾರ್ಥಿನಿ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ರಾಜಾಜಿನಗರದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಪೂಜಿತಾ ನಾಪತ್ತೆಯಾಗಿದ್ದಳು.
ಆಕೆಯ ಪೋಷಕರು ಬೆಂಗಳೂರು ಶ್ರೀರಾಂಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೂಜಿತಾ ಶಾಲೆಗೆ ಹೋದವಳು ನಾಪತ್ತೆಯಾಗಿದ್ದಳು. ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನಲೆಯಲ್ಲಿ ಶಿಕ್ಷಕರು ಅಂಕಪಟ್ಟಿಗೆ ಪೋಷಕರ ಸಹಿ ಹಾಕಿಸಿಕೊಂಡು ಬರುವಂತೆ ಹೇಳಿದ್ದರಿಂದ ಭಯಗೊಂಡ ಪೂಜಿತಾ ಮನೆ ಬಿಟ್ಟು ಹೋಗಿದ್ದಳೆನ್ನಲಾಗಿತ್ತು. ಆಕೆಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಜಾಲತಾಣದಲ್ಲಿಯೂ ಪೂಜಿತಾ ಪತ್ತೆಗಾಗಿ ಮಾಹಿತಿ ಶೇರ್ ಮಾಡಲಾಗಿತ್ತು.
ಆಕೆ ಮುಂಬೈನಿಂದ ಬರುತ್ತಿದ್ದ ರೈಲಿನಲ್ಲಿ ಸಂಬಂಧಿಕರಿಗೆ ಸಿಕ್ಕಿದ್ದು, ಅವರು ಹುಬ್ಬಳ್ಳಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಪೂಜಿತಾ ಸೇಫ್ ಆಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಆಕೆಯ ಸಂಬಂಧಿ ಮುಕುಂದ್ ಎಂಬುವವರು ಮನೆಗೆ ಕರೆದುಕೊಂಡು ಹೋಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.