ಬೆಂಗಳೂರು: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬೆದರಿಸಿ, ಸುಮಾರು 4 ಕೆ.ಜಿ. ತೂಕದ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿನ್ನಾಭರಣ ಗಿರವಿ ಅಂಗಡಿ ಮಾಲೀಕ ಬುಂದಾರಾಮ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಬುಂದಾರಾಮ್ ಅವರ ಪತ್ನಿ ಮನೆಯಲ್ಲಿದ್ದ ಸಂದರ್ಭದಲ್ಲಿ ಒಳಗೆ ನುಗ್ಗಿದ ದುಷ್ಕರ್ಮಿಗಳು, ಕೈಕಾಲು ಕೈಕಟ್ಟಿ ಬಾಯಿಗೆ ಪ್ಲಾಸ್ಟರ್ ಹಚ್ಚಿದ್ದಾರೆ. ಬೀರು ಬೀಗ ಕೊಡಲು ಬೆದರಿಸಿದ್ದು, ಕೊಡಲು ನಿರಾಕರಿಸಿದಾಗ, ಚಾಕು, ಗನ್ ತೋರಿಸಿದ್ದಾರೆ. ಹೆದರಿದ ಬುಂದಾರಾಮ್ ಪತ್ನಿ ಬೀಗ ಕೊಟ್ಟಿದ್ದಾರೆ. ಆಗ ಮನೆಯಲ್ಲಿದ್ದ ಸುಮಾರು 4 ಕೆ.ಜಿ. ಚಿನ್ನಾಭರಣ, 1.5 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪುರಂ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಬುಂದಾರಾಮ್ ಅಂಗಡಿಯಲ್ಲಿ ಕೆಲಸ ಮಾಡಿದ್ದವರ ವಿಚಾರಣೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.