ಮಗನಿಗೆ ಬುಲೆಟ್ ಕೊಡಿಸಲು ತಾಯಿಯೊಬ್ಬಳು ತನ್ನ ಮಕ್ಕಳ ಜೊತೆ ಸೇರಿ ಮನೆ ಕಳ್ಳತನ ಮಾಡಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ತಾಯಿ ಹಾಗೂ ಮಕ್ಕಳು ಸಂಜಯ್ ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಂಜಯ್ ನಗರದಲ್ಲಿರುವ ರಣಜಿ ಕ್ರಿಕೆಟ್ ಆಟಗಾರ ಸಮರ್ಥ್ ಅವರ ಮನೆಯಲ್ಲಿ ಆಗಸ್ಟ್ 21 ರಂದು ಸುಮಾರು 360 ಗ್ರಾಂ ಚಿನ್ನಾಭರಣ ಕಳುವಾಗಿದ್ದು, ಅವರ ಮನೆ ಕೆಲಸದಾಕೆ ಗೌರಮ್ಮಳನ್ನು ಅನುಮಾನದ ಮೇರೆಗೆ ಪೊಲೀಸರು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ.
ತನ್ನ ಮಗನಿಗೆ ಬೈಕ್ ಕೊಡಿಸುವ ಉದ್ದೇಶದಿಂದ ಕಳ್ಳತನವೆಸಗಲು ಒಂದು ತಿಂಗಳ ಹಿಂದೆಯೇ ಮನೆಯ ಕೀ ಯನ್ನು ಗೌರಮ್ಮ ಕದ್ದಿದ್ದು, ಇತ್ತೀಚೆಗೆ ಸಮರ್ಥ್ ಅವರ ತಾಯಿ ಮನೆಗೆಲಸದಾಕೆ ಗೌರಮ್ಮಳನ್ನು ಕರೆದುಕೊಂಡು ಮಗಳ ಮನೆಗೆ ಹೋಗಿದ್ದರೆನ್ನಲಾಗಿದೆ.
ಇದೇ ಸಂದರ್ಭ ಸಾಧಿಸಿದ ಗೌರಮ್ಮ, ತಾನು ಕದ್ದಿದ್ದ ಕೀ ಮೂಲಕ ಮಕ್ಕಳಾದ ದೀಪಾ ಹಾಗೂ ಯೋಗಿಯಿಂದ ಮನೆ ಕಳ್ಳತನ ಮಾಡಿಸಿದ್ದಳೆನ್ನಲಾಗಿದೆ. ಸಮರ್ಥ್ ಅವರ ತಾಯಿ ನಾಗರತ್ನ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯ್ ನಗರ ಠಾಣೆ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.