ಕೇರಳ ವಿಧಾನಸಭಾ ಚುನಾವಣೆಯಲ್ಲಿ ನೆಮೊಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 86 ವರ್ಷದ ಓ. ರಾಜಗೋಪಾಲ್ ಇತಿಹಾಸ ಸೃಷ್ಟಿಸಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಖಾತೆಯನ್ನು ಪ್ರಥಮವಾಗಿ ತೆರೆದ ದಾಖಲೆಗೆ ರಾಜಗೋಪಾಲ್ ಪಾತ್ರರಾಗಿದ್ದಾರೆ.
ಕೇರಳ ಲೋಕಸಭೆ ಹಾಗೂ ವಿಧಾನಸಭೆಯ ಈವರೆಗಿನ ಚುನಾವಣೆಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆದಿರಲಿಲ್ಲ. ಈ ಬಾರಿಯೂ ಬಿಜೆಪಿಗೆ ಅದೇ ಪರಿಸ್ಥಿತಿ ಬರಲಿದೆ ಎಂದು ಪ್ರತಿ ಪಕ್ಷಗಳು ವ್ಯಂಗ್ಯ ಮಾಡುತ್ತಿದ್ದು, ಆದರೆ ರಾಜಗೋಪಾಲ್ ಗೆಲುವು ಸಾಧಿಸುವ ಮೂಲಕ ಈ ಮಾತನ್ನು ಸುಳ್ಳಾಗಿಸಿದ್ದಾರೆ.
ತಿರುವನಂತಪುರಂ ಜಿಲ್ಲೆಯ ಮೆಮೊಮ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ರಾಜಗೋಪಾಲನ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐ-ಎಂ ನ ಶಿವನ್ ಕುಟ್ಟಿ ಅವರನ್ನು 8 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. 2011 ರಲ್ಲಿ ಇದೇ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ರಾಜಗೋಪಾಲ್ ಎರಡನೇ ಸ್ಥಾನ ಪಡೆದುಕೊಂಡಿದ್ದರು. 1999, 2004 ಮತ್ತು 2014 ರಲ್ಲಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜಗೋಪಾಲ್ ಒಮ್ಮೆಯೂ ಗೆಲುವು ಸಾಧಿಸಿರಲಿಲ್ಲ.