ಛತ್ತೀಸಗಢ: ರಾಯಪುರದಿಂದ ಹಾವಡಾಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ರೈಲಿನಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯ ಬ್ಯಾಗ್ ನಲ್ಲಿದ್ದ ಹಣ ಮತ್ತು ಚಿನ್ನದ ಬಿಸ್ಕೆಟ್ ಗಳು ಹಲವು ಅನುಮಾನಕ್ಕೆ ಕಾರಣವಾಗಿವೆ.
55 ವರ್ಷದ ಸುಭಾಷಚಂದ್ ಸುರಾನಾ ಮುಂಬೈನಿಂದ ಹಾವಡಾ ಹೋಗುವ ಗೀತಾಂಜಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಟಾಟಾ ನಗರ ಸ್ಟೇಷನ್ ತಲುಪುವ ಹೊತ್ತಿಗೆ ಸುಭಾಷಚಂದ್ ಮೂರ್ಛೆತಪ್ಪಿ ಬಿದ್ದರು. ಆಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ರೈಲು ಖರಗಪುರ ತಲುಪುತ್ತಿದ್ದಂತೆಯೇ ಸಹಯಾತ್ರಿಗಳು ವಿಷಯವನ್ನು ಪೊಲೀಸರಿಗೆ ತಿಳಿಸಿದರು.
ಪೊಲೀಸರು ಸುಭಾಷಚಂದ್ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಹೇಳಿದ್ದಾರೆ. ಮೃತ ವ್ಯಕ್ತಿಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ 99,03,490 ರೂಪಾಯಿಗಳು ಮತ್ತು ಮೂರು ಚಿನ್ನದ ಬಿಸ್ಕೆಟ್ ಗಳು ದೊರಕಿವೆ. ಸುಭಾಷಚಂದ್ ಅವರು ಇಷ್ಟೊಂದು ಮೊತ್ತದ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.