ಅಂಕಾರಾ: ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಹೀಗೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಶಕ್ತಿಶಾಲಿ ಬಾಂಬ್ ಸ್ಪೋಟಿಸಿದ್ದಾರೆ.
ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸುಮಾರು 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ. ಟರ್ಕಿಯ ದಕ್ಷಿಣ ಪ್ರಾಂತ್ಯದ ಗಾಜಿಯಾಂಟೆಪ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಿರಿಯಾ ಮತ್ತು ಟರ್ಕಿಯ ಗಡಿ ಪ್ರದೇಶದಲ್ಲಿರುವ ಈ ನಗರದಲ್ಲಿ ಮದುವೆಯೊಂದು ನಡೆಯುತ್ತಿತ್ತು. ಮದುವೆ ಮನೆಯ ಮೇಲೆಯೇ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಉಪಪ್ರಧಾನಿ ಮೆಹಮತ್ ಸಿಂಸೆಕ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಐಸಿಸ್ ಇಲ್ಲವೇ ಕುರ್ದಿಶ್ ಉಗ್ರ ಸಂಘಟನೆಯ ಕಾರ್ಯಕರ್ತರು ಈ ಕೃತ್ಯ ಎಸಗಿರಬಹುದೆಂದು ಹೇಳಿದ್ದಾರೆ. ಇದೊಂದು ಪೈಶಾಚಿಕ ಕೃತ್ಯವಾಗಿದ್ದು, ಉಗ್ರರನ್ನು ಸದೆ ಬಡಿಯುವುದಾಗಿ ತಿಳಿಸಿದ್ದಾರೆ.