ಪರೀಕ್ಷೆಗಳು ಮುಗಿದ ಬಳಿಕ ಶಾಲೆಗಳಿಗೆ ಈಗ ರಜೆ ಆರಂಭವಾಗಿದೆ. ರಜಾ ದಿನಗಳನ್ನು ಕಳೆಯಲೆಂದು ತನ್ನ ತಾಯಿ ಹಾಗೂ ತಮ್ಮನೊಂದಿಗೆ ದುಬೈನಲ್ಲಿ ನೆಲೆಸಿದ್ದ ತಂದೆಯ ಬಳಿಗೆ ಹೋಗಿದ್ದ 11 ವರ್ಷದ ಬಾಲಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈ ದುರಂತದಲ್ಲಿ ಆತನ ತಂದೆಯೂ ಮೃತಪಟ್ಟಿದ್ದಾರೆ.
ಕೇರಳ ಮೂಲದ 46 ವರ್ಷದ ಸನ್ನಿ ಎಂಬವರು ಕಳೆದ 20 ವರ್ಷಗಳಿಂದ ಉದ್ಯೋಗ ನಿಮಿತ್ತ ದುಬೈನಲ್ಲಿ ನೆಲೆಸಿದ್ದಾರೆ. ಕೆಲ ವರ್ಷಗಳ ಕಾಲ ಅಲ್ಲಿಯೇ ಇದ್ದ ಕುಟುಂಬ ವರ್ಗ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಕೇರಳಕ್ಕೆ ಮರಳಿ ಬಂದಿದ್ದರು.
ಶಾಲೆಗೆ ರಜೆ ಆರಂಭವಾದ ಕಾರಣ ಸನ್ನಿಯವರ ಬಳಿಗೆ ಕುಟುಂಬ ವರ್ಗ ತೆರಳಿದ್ದು, ಚರ್ಚ್ ಗೆ ಹೋಗಿ ವಾಪಾಸ್ ಬರುವಾಗ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಸನ್ನಿಯವರ ಪುತ್ರ 11 ವರ್ಷದ ಆಲ್ವಿನ್ ಸ್ಥಳದಲ್ಲೇ ಸಾವನ್ನಪ್ಪಿದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸನ್ನಿ ಮೃತಪಟ್ಟಿದ್ದಾರೆ. ಸನ್ನಿಯವರ ಪತ್ನಿ ಜಾಲಿ ಹಾಗೂ ಮತ್ತೊಬ್ಬ ಪುತ್ರ ಎಡ್ವಿನ್ ಗಾಯಗೊಂಡಿದ್ದು, ದುಬೈನ ರಶೀದ್ ಆಸ್ಪತ್ರೆಗೆ ಅವರುಗಳನ್ನು ದಾಖಲಿಸಲಾಗಿದೆ.