ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸತನದ ಅಲೆ ಎದ್ದಿದೆ. ಸ್ಟಾರ್ ನಟರು ಬೇರೆಯವರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲ್ಟಿಸ್ಟಾರ್ ಚಿತ್ರಗಳು ಬರತೊಡಗಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೇರೆ ನಟರ ಚಿತ್ರಗಳಲ್ಲಿಯೂ ಹಾಡಿದ್ದಾರೆ.
ಇತ್ತೀಚೆಗಷ್ಟೇ ಶರಣ್ ಅಭಿನಯದ ಚಿತ್ರಕ್ಕೆ ಹಾಡಿದ್ದ ಪುನೀತ್ ರಾಜ್ ಕುಮಾರ್ ಇದೀಗ, ರಿಯಲ್ ಸ್ಟಾರ್ ಉಪೇಂದ್ರ ಅವರ ಚಿತ್ರವೊಂದಕ್ಕೆ ಹಾಡಿದ್ದಾರೆ. ಆರ್. ಅನಂತರಾಜ್ ನಿರ್ದೇಶನದ, ಉಪೇಂದ್ರ ಅಭಿನಯದ ರಿಮೇಕ್ ಚಿತ್ರದಲ್ಲಿ ಕನ್ನಡ ಅಭಿಮಾನ ವ್ಯಕ್ತಪಡಿಸುವ ಹಾಡೊಂದು ಇದ್ದು, ಇದಕ್ಕೆ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರು ಈ ಹಾಡನ್ನು ರಚಿಸಿದ್ದು, ಜಿ.ಪಿ.ರಾಜರತ್ನಂ ಅವರ ಸಾಹಿತ್ಯವನ್ನು ನೆನಪಿಸುವಂತಿದೆ ಎನ್ನಲಾಗಿದೆ.
ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕಲೈ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಉಪೇಂದ್ರ ಅವರೊಂದಿಗೆ ಪ್ರಿಯಾಮಣಿ, ಆವಂತಿಕಾ ಶೆಟ್ಟಿ, ಚಿತ್ರಾ ಶೆಣೈ, ವಿನಯಾ ಪ್ರಸಾದ್ ಮೊದಲಾದವರು ಅಭಿನಯಿಸಿದ್ದಾರೆ.