ಕುಖ್ಯಾತ ಭೂಗತ ಪಾತಕಿ, ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ನ ಸಹೋದರಿ ಹಸೀನಾ ಪಾರ್ಕರ್ ಳ ಕಿರಿಯ ಪುತ್ರ ಆಲಿ ಶಾ ಬುಧವಾರದಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ದಕ್ಷಿಣ ಮುಂಬೈನ ರಸೂಲ್ ಮಸೀದಿಯಲ್ಲಿ ಈ ವಿವಾಹ ನಡೆಯುತ್ತಿದ್ದು, ಬಳಿಕ ಜುಹುವಿನ ತಾರಾ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ ಎನ್ನಲಾಗಿದೆ. ಈ ವಿವಾಹ ಸಮಾರಂಭವನ್ನು ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂ ಮತ್ತಾತನ ಕುಟುಂಬ ವರ್ಗದವರು ಸ್ಕೈಪ್ ನಲ್ಲಿ ವೀಕ್ಷಿಸಲಿದ್ದು, ಇದಕ್ಕೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.
ಈ ವಿವಾಹ ಸಮಾರಂಭಕ್ಕೆ ಪೊಲೀಸರ ವಾಟೆಂಡ್ ಲಿಸ್ಟ್ ನಲ್ಲಿರುವ ಕೆಲ ಪಾತಕಿಗಳು ಆಗಮಿಸಬಹುದೆಂಬ ಹಿನ್ನಲೆಯಲ್ಲಿ ಪೊಲೀಸರೂ ಕೂಡಾ ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ ವಿರೋಧಿ ಗುಂಪಿನವರು ವಿವಾಹ ಸಮಾರಂಭದಲ್ಲಿ ದುಷ್ಕೃತ್ಯ ಎಸಗಬಹುದೆಂಬ ಗುಮಾನಿಯೂ ಪೊಲೀಸರಿಗಿದೆ. ದಾವೂದ್ ಇಬ್ರಾಹಿಂ ನ ಸಹೋದರ ಇಕ್ಬಾಲ್ ಕಸ್ಕರ್, ಸಹೋದರಿಯರಾದ ಝೈತೂನ್ ಹಾಗೂ ಫರ್ಜಾನಾ ಕುಟುಂಬ ಸದಸ್ಯರೊಂದಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆನ್ನಲಾಗಿದೆ.