ಉಡುಪಿ: ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಅಪಾಯ ಎದುರಾಗುತ್ತದೆ. ಕೆಲವೊಮ್ಮೆ ತಾಂತ್ರಿಕ ದೋಷದಿಂದ ಚಾಲನೆಯಲ್ಲಿದ್ದ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ.
ಹೀಗೆ ಚಲಿಸುತ್ತಿದ್ದ ಕಾರಿನಲ್ಲಿ ತಾಂತ್ರಿಕ ದೋಷದಿಂದ ಕಾಣಿಸಿಕೊಂಡ ಬೆಂಕಿ, ಕ್ಷಣಾರ್ಧದಲ್ಲಿ ಇಡೀ ವಾಹನಕ್ಕೆ ವ್ಯಾಪಿಸಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗಿಲ್ಲ. ಉಡುಪಿಯ ಕಾಪು ಸಮೀಪದ ಹೊಸ ಫ್ಲೈ ಓವರ್ ಮೇಲೆ ಚಾಲನೆಯಲ್ಲಿದ್ದ ವ್ಯಾಗನರ್ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ರಸ್ತೆ ಬದಿಗೆ ವಾಹನ ನಿಲ್ಲಿಸಿ, ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾನೆ. ಆದರೆ, ಕ್ಷಣಾರ್ಧದಲ್ಲಿ ಇಡೀ ವಾಹನಕ್ಕೆ ಬೆಂಕಿ ಆವರಿಸಿದೆ.
ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಕಾರು ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ವಾಹನ ಸುಟ್ಟು ಹೋಗಿದೆ. ಘಟನೆಯಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು ಎನ್ನಲಾಗಿದೆ.