ನವದೆಹಲಿ: ಕೆರೆಬಿಯನ್ ನಾಡಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಜಯಿಸಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, 4ನೇ ಪಂದ್ಯವನ್ನು ಜಯಿಸಿದಲ್ಲಿ ನಂಬರ್ ಒನ್ ಪಟ್ಟಕ್ಕೇರಲಿದೆ.
ಟೆಸ್ಟ್ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ 112 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 118 ಅಂಕಗಳೊಂದಿಗೆ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ವಿಂಡೀಸ್ ನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಜಯಿಸಿ ದಾಖಲೆ ಬರೆದಿರುವ ಕೊಹ್ಲಿ ಟೀಂ, ಸರಣಿಯ ಅಂತಿಮ ಪಂದ್ಯವನ್ನು ಜಯಿಸಿದಲ್ಲಿ ನಂಬರ್ ಸ್ಥಾನಕ್ಕೇರಲಿದೆ. ಆಸೀಸ್ ನಂಬರ್ ಒನ್ ಪಟ್ಟ ಉಳಿಸಿಕೊಳ್ಳಲು ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೋತರೆ ಪಾಕ್ ಮೊದಲ ಸ್ಥಾನಕ್ಕೇರಲಿದೆ.
111 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯಿಸಿದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ನಲ್ಲಿ ಅಗ್ರ ಸ್ಥಾನಕ್ಕೇರಲಿದೆ ಎನ್ನಲಾಗಿದೆ. ಗುರುವಾರದಿಂದ ಕೆರೆಬಿಯನ್ ನಾಡಲ್ಲಿ 4ನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ವಿಂಡೀಸ್ ವಿರುದ್ಧ ಜಯಗಳಿಸಿದಲ್ಲಿ ದಾಖಲೆಯೊಂದಿಗೆ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಲಿದೆ.