ದೇಶದಾದ್ಯಂತ ಇಂದು 70 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಗ್ರರ ಕರಿ ನೆರಳು ಬೀಳಬಹುದೆಂಬ ಕಾರಣಕ್ಕೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಇದರ ಮಧ್ಯೆ ನವದೆಹಲಿಯ ರಾಷ್ಟ್ರಪತಿ ಭವನದ ಬಳಿ ಇರುವ ಬಸ್ ನಿಲ್ದಾಣದಲ್ಲಿ ಭಾನುವಾರದಂದು ಅನಾಥವಾಗಿ ಬಿದ್ದಿದ್ದ ಬ್ಯಾಗ್ ಒಂದು ಆತಂಕವನ್ನು ಸೃಷ್ಠಿಸಿದ್ದ ಘಟನೆ ನಡೆದಿದೆ. ಮಧ್ಯಾಹ್ನ 3.30 ರ ಸುಮಾರಿಗೆ ಪೊಲೀಸರಿಗೆ ಬ್ಯಾಗ್ ಆನಾಥವಾಗಿ ಬಿದ್ದಿರುವ ಕುರಿತು ಕರೆ ಬಂದಿದ್ದು, ತಕ್ಷಣವೇ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸುಮಾರು 1 ಗಂಟೆಗಳ ಕಾಲ ತಪಾಸಣೆ ನಡೆಸಿದ ಬಳಿಕ ಬ್ಯಾಗ್ ನಲ್ಲಿ ಆತಂಕಪಡುವ ಯಾವುದೇ ವಸ್ತು ಇಲ್ಲದಿರುವುದನ್ನು ಕಂಡ ಪೊಲೀಸರು ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.
ಇಷ್ಟೆಲ್ಲಾ ಅವಾಂತರವಾದ ಕೆಲ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ವ್ಯಕ್ತಿಯೊಬ್ಬ ಆ ಬ್ಯಾಗ್ ತನಗೆ ಸಂಬಂಧಿಸಿದ್ದು ಎಂದು ಹೇಳಿದ್ದಾನೆ. ಆತನ ಪೂರ್ವಾಪರ ವಿಚಾರಿಸಿದ ಪೊಲೀಸರು ಕೊನೆಗೆ ಬ್ಯಾಗ್ ಕೊಟ್ಟು ಕಳುಹಿಸಿದ್ದಾರೆ.