ಆಸ್ಸಾಂನ ಉದಲ್ಗುರಿ ಜಿಲ್ಲೆಯಲ್ಲಿ ಹರಿಸಿಂಗ ಎಂಬ ಪುಟ್ಟ ಊರಿದೆ. ಹಲವು ಸೌಲಭ್ಯಗಳಿಂದ ವಂಚಿತವಾಗಿರುವ ಈ ಹಳ್ಳಿಯಿಂದ ಒಂದು ಅದ್ಭುತ ಪ್ರತಿಭೆ ಹೊರಹೊಮ್ಮಿದೆ. ಊರಿನ ಮಂದಿ 9 ವರ್ಷದ ಹುಡುಗ ಚಂದನ್ ಬೋರೊನ ಸಾಧನೆಗೆ ಹೆಮ್ಮೆಪಡುತ್ತಿದ್ದಾರೆ. ಅವನ ಭವಿಷ್ಯದ ಕುರಿತು ಕನಸುಗಳನ್ನೂ ಕಾಣುತ್ತಿದ್ದಾರೆ.
ಒಬ್ಬ ಕಸ ಗುಡಿಸುವವನ ಮಗನಾದ ಚಂದನ್, ಜರ್ಮನಿಯಲ್ಲಿ ನಡೆಯುವ ಫುಟ್ಬಾಲ್ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾನೆ. ಟಾಟಾ ಟ್ರಸ್ಟ್ ನವರು ಆಯೋಜಿಸಿದ್ದ ಟ್ಯಾಲೆಂಟ್ ಹಂಟ್ ನಲ್ಲಿ ಚಂದನ್ ಆಯ್ಕೆಯಾಗಿದ್ದಾನೆ. ಇದರಿಂದಾಗಿ ಚಂದನ್ 6 ವರ್ಷಗಳ ಕಾಲ ಜರ್ಮನಿಯಲ್ಲಿ ಫುಟ್ಬಾಲ್ ತರಬೇತಿ ಪಡೆಯಲಿದ್ದಾನೆ. ಜರ್ಮನಿ ಸರ್ಕಾರದ ಯು ಡ್ರೀಮ್ ಫುಟ್ಬಾಲ್ 15 ವರ್ಷದ ಒಳಗಿನ ಫುಟ್ಬಾಲ್ ಪ್ರತಿಭೆಗಳನ್ನು ಶೋಧಿಸುತ್ತಿತ್ತು. ಈ ಶೋಧನೆಯ ಫಲವೇ ಚಂದನ್.
ಹರಿಸಿಂಗ್ ನ ರೈಲ್ವೆ ನಿಲ್ದಾಣದ ಹತ್ತಿರ ಚಿಕ್ಕ ಗುಡಿಸಲಿನಲ್ಲಿ ವಾಸವಿರುವ ಚಂದನ್ ಕುಟುಂಬ ಆರ್ಥಿಕವಾಗಿ ತುಂಬ ಹಿಂದಿದೆ. ತಂದೆ ಕಸ ಗುಡಿಸುವವನಾದರೆ ತಾಯಿ ಒಂದು ಚಿಕ್ಕ ಟೀ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವರ ಮಗ ಚಂದನ್ ಅನ್ನು ಈಗ ಎಲ್ಲರೂ ‘ಜರ್ಮನಿಗೆ ಹೋಗುವ ಹುಡುಗ’ ಎಂದೇ ಕರೆಯುತ್ತಿದ್ದಾರೆ. ಚಂದನ್ ಗೆ ಕೋಚಿಂಗ್ ನೀಡಿದ ಸ್ಯಾಮೌಲ್ ಬಸುಮತರಿ ಕೂಡ ಚಂದನ್ ಸಾಧನೆಯಿಂದ ಸಂತೋಷಗೊಂಡಿದ್ದಾರೆ.
ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಚಂದನ್ ಈಗಾಗಲೇ ಫುಟ್ಬಾಲ್ ಪ್ರಪಂಚದಲ್ಲಿ ಸಾಧನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾನೆ. “ನನಗೆ ಜರ್ಮನಿ ದೇಶದ ಬಗ್ಗೆ ಏನೂ ತಿಳಿದಿಲ್ಲ. ಆದರೆ ನಾನು ಅಲ್ಲಿ ಹೋಗಿ ಫುಟ್ಬಾಲ್ ಆಡುವುದರ ಬಗ್ಗೆ ಕಾನ್ಫಿಡೆಂಟ್ ಆಗಿದ್ದೇನೆ” ಎಂದಿದ್ದಾನೆ 9 ವರ್ಷದ ಚಂದನ್.