ರಿಯೋ ಡಿ ಜನೈರೋ: ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನಲ್ಲಿ ಈಗಾಗಲೇ ಕ್ರೀಡಾಪಟುಗಳಿಂದ ಪದಕದ ಬೇಟೆ ಆರಂಭವಾಗಿದೆ. ವಿವಿಧ ದೇಶಗಳ ಸುಮಾರು 11,000 ಸ್ಪರ್ಧಿಗಳು ರಿಯೋ ಅಂಗಳದಲ್ಲಿದ್ದಾರೆ.
ಜಾಗತಿಕ ಕ್ರೀಡಾಹಬ್ಬದಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ರಿಯೋ ಒಲಿಂಪಿಕ್ಸ್ ಆರಂಭಕ್ಕೂ ಮೊದಲು, ಝೀಕಾ ವೈರಸ್ ಕಾಟ ಶುರುವಾಗಿದ್ದು, ಇದೇ ಕಾರಣಕ್ಕೆ ಭಾರೀ ಸುದ್ದಿಯಾಗಿತ್ತು. ಇದೀಗ ಇದೇ ಕಾರಣಕ್ಕೆ ಪ್ರೇಕ್ಷಕರು ಗೋಲು ರಕ್ಷಕಿಯೊಬ್ಬಳನ್ನು ಗೋಳು ಹೊಯ್ದುಕೊಂಡಿದ್ದಾರೆ. ಅಮೆರಿಕ ಮತ್ತು ಫ್ರಾನ್ಸ್ ನಡುವೆ ನಡೆದ ಪಂದ್ಯದಲ್ಲಿ ಅಮೆರಿಕ ಫುಟ್ ಬಾಲ್ ತಂಡದ ಗೋಲು ರಕ್ಷಕಿ ಹೋಪ್ ಸೊಲೊಗೆ ಝೀಕಾ, ಝೀಕಾ ಎಂದು ರೇಗಿಸಿದ್ದಾರೆ.
ಹೋಪ್ ಸೊಲೊ ರಿಯೋಗೆ ತೆರಳುವ ಮೊದಲು, ಸಾಮಾಜಿಕ ಜಾಲತಾಣ ಇನ್ ಸ್ಟಾ ಗ್ರಾಂನಲ್ಲಿ ರಿಯೋದಲ್ಲಿ ಝೀಕಾ ವೈರಸ್ ಎಂದು ಅಡಿ ಬರಹ ನೀಡಿ ಮುಖಮುಚ್ಚಿಕೊಂಡು ಕೈಯಲ್ಲಿ ಕ್ರಿಮಿನಾಶಕ ಹಿಡಿದುಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಳು.
ರಿಯೋದಲ್ಲಿ ಝೀಕಾ ಪ್ರೂಫ್ ಬೇಕು ಎಂದೆಲ್ಲಾ ಹೇಳಿದ್ದಳು. ಇದೇ ಕಾರಣಕ್ಕೆ ರಿಯೋ ಅಂಗಳದಲ್ಲಿ ಈ ಆಟಗಾರ್ತಿಗೆ ರೇಗಿಸಲಾಗಿದೆ. ಸಾಮಾನ್ಯವಾಗಿ ಆಟಗಾರರನ್ನು ಹುರಿದುಂಬಿಸಲು ಅವರ ಹೆಸರನ್ನು ಕೂಗಲಾಗುತ್ತದೆ. ಇಲ್ಲಿ ಝೀಕಾ, ಝೀಕಾ ಎಂದು ಹೋಪ್ ಸೊಲೊ ಗೆ ಕೂಗಿ ಗೋಳು ಹೊಯ್ದುಕೊಳ್ಳಲಾಗಿದೆ.